ಮಲ್ಪೆ: ಊರಿನ ಸ್ವಚ್ಚತೆಗೆ ಕೈ ಜೋಡಿಸಿದ ಸರ್ವ ಧರ್ಮೀಯರು

Update: 2024-10-02 15:30 GMT

ಮಲ್ಪೆ, ಅ.2: ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಅಭಿಯಾನದ ಪ್ರಯುಕ್ತ ಮಲ್ಪೆ ಸಮೀಪದ ತೊಟ್ಟಂ ನಲ್ಲಿ ಸರ್ವ ಧರ್ಮೀಯರು ಒಂದಾಗಿ ಸೇರಿ ನಮ್ಮ ನಡೆ ಸ್ವಚ್ಚತೆ ಕಡೆ ಎಂಬ ಧ್ಯೇಯದೊಂದಿಗೆ ಸ್ವಚ್ಚತಾ ಅಭಿಯಾನವನ್ನು ಬುಧವಾರ ಕೈಗೊಂಡಿದ್ದು, ಈ ಅಭಿಯಾನಕ್ಕೆ ಸ್ಥಳೀಯ ಸರ್ವ ಧಮೀಯರು ಜೊತೆಯಾಗಿ ಸೇರಿ ಮಲ್ಪೆ, ತೊಟ್ಟಂ ಪರಿಸರದ ರಸ್ತೆ ಹಾಗೂ ಸಮುದ್ರ ತೀರದಲ್ಲಿನ ಕಸವನ್ನು ಸ್ವಚ್ಚಗೊಳಿಸುವ ಮೂಲಕ ಮಾದರಿ ಕಾರ್ಯ ಕೈಗೊಂಡರು.

ಉಡುಪಿ ಧರ್ಮಪ್ರಾಂತ್ಯದ ನಿರ್ಮಲ ಪರಿಸರ ಅಭಿಯಾನದಡಿ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಕಥೊಲಿಕ್ ಸಭಾ, ಸ್ತ್ರೀ ಸಂಘಟನೆ, ಭಾರತೀಯ ಕಥೊಲಿಕ್ ಯವಸಂಚಾಲನ, ವೈಸಿಎಸ್ ಸಂಘಟನೆ ಹಾಗೂ ಸಮನ್ವಯ ಸರ್ವ ಧರ್ಮ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ತೊಟ್ಟಂ ಚರ್ಚಿನ ಬಳಿ ಚಾಲನೆ ನೀಡಲಾಯಿತು.

ಇದೇ ವೇಳೆ ಏಕಕಾಲದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಮಲ್ಪೆಮಹಿಳಾ ವಿಭಾಗ ಹಾಗೂ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ ಮಲ್ಪೆ ಘಟಕದ ಕಾರ್ಯಕರ್ತರ ನೇತೃತ್ವದಲ್ಲಿ ಮಲ್ಪೆಯಿಂದ ತೊಟ್ಟಂ ವರೆಗೆ ಸ್ವಚ್ಚತಾ ಅಭಿಯಾನ ನಡೆಸಿದರು. ಸ್ವಚ್ಚತಾ ಅಭಿಯಾನದಲ್ಲಿ ಸುಮಾರು 150 ಮಂದಿ ನಾಗರಿಕರು ಪಾಲ್ಗೊಂಡು 300 ಟನ್‌ಗಳಿಗೂ ಅಧಿಕ ಕಸ, ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲಾಯಿತು.

ಈ ವೇಳೆ ಮಾತನಾಡಿದ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಧರ್ಮ ಗುರು ವಂ.ಡೆನಿಸ್ ಡೆಸಾ ಮಾತನಾಡಿ, ನಮ್ಮ ಪರಿಸರ ಚೆನ್ನಾಗಿದ್ದರೆ ನಮ್ಮ ಆರೋಗ್ಯ ಕೂಡ ಸರಿಯಾಗಿರುತ್ತದೆ. ಸ್ವಚ್ಚತೆಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ವಿದ್ದು, ನಮ್ಮ ಊರು ಮತ್ತು ಸುತ್ತಮುತ್ತಲಿನ ಪರಿಸರವನ್ನು ನೈರ್ಮಲ್ಯವಾಗಿಡುವುದರಿಂದ ವಿವಿಧ ರೋಗಗಳಿಂದ ರಕ್ಷಣೆ ಪಡೆಯಲು ಸಾಧ್ಯವಿದೆ. ನಮ್ಮ ಸಮಾಜದ ಸ್ವಾಸ್ಥ್ಯ ಕೂಡ ಚೆನ್ನಾಗಿರಲು ಇಂತಹ ಅಭಿಯಾನಗಳು ಸಹಕಾರಿಯಾಗಿದೆ ಎಂದು ಹೇಳಿದರು.

ಸಮನ್ವಯ ಸರ್ವಧರ್ಮ ಸಮಿತಿ ಅಧ್ಯ ರಮೇಶ್ ತಿಂಗಳಾಯ ಮಾತನಾಡಿ, ಎಲ್ಲರೊಂದಿಗೆ ಸೇರಿಕೊಂಡು ತೊಟ್ಟಂ ಪರಿಸರವನ್ನು ಸ್ವಚ್ಚಗೊಳಿಸುವ ಕಾರ್ಯದಲ್ಲಿ ಈಗಾಗಲೇ 300 ಟನ್‌ಗಳಿಗೂ ಅಧಿಕ ಕಸವನ್ನು ಸಂಗ್ರಹಿಸಿದ್ದು, ನಮ್ಮ ಪರಿಸರ ಸ್ವಚ್ಚವಾಗಿದ್ದರೆ ಪ್ರತಿಯೊಬ್ಬರೂ ಆರೋಗ್ಯಯುತವಾಗಿರುತ್ತಾರೆ. ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕಾಗಿದೆ ಎಂದರು.

ತೆಂಕನಿಡಿಯೂರು ಗ್ರಾಪಂ ಸದಸ್ಯ ವಿನೋದ್ ಸುವರ್ಣ, ಕಥೊಲಿಕ್ ಸಭಾ ಅಧ್ಯಕ್ಷ ವೀಣಾ ಫೆರ್ನಾಂಡಿಸ್, ಸ್ತ್ರೀ ಸಂಘಟನೆ ಅಧ್ಯಕ್ಷ ಲೂಸಿ ಫುರ್ಟಾಡೊ, ಜಮಾತ್ ಇ ಇಸ್ಲಾಮಿ ಹಿಂದ್ ಸಂಯೋಜಕ ಶಬೀರ್, ಸ್ವಚ್ಚತಾ ಅಭಿಯಾನದ ಸಂಚಾಲಕ ಒನಿಲ್ ಡಿಸೋಜ, ತೊಟ್ಟಂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಐಸಿವೈಎಂ ವೈಸಿಎಸ್ ಸಂಘಟನೆಗಳ ಸಂಯೋಜಕ ಲೆಸ್ಲಿ ಆರೋಜ, ಸುನೀತಾ ಡೀಸೊಜ, ಲವೀನಾ ಆರೋಝಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News