ಉಡುಪಿ: ಬಬ್ಬುಸ್ವಾಮಿ ಲೇಔಟ್ ನಿವಾಸಿಗರ ಸಮಸ್ಯೆಗಳ ಬಗ್ಗೆ ಚರ್ಚೆ
ಉಡುಪಿ: ಕೊಳಚೆ ಅಭಿವೃದ್ಧಿ ಮಂಡಳಿಯ ಮೂಲಕ ಮಣಿಪಾಲ ಸಮೀಪದ ಸರಳೇಬೆಟ್ಟು ವಾರ್ಡಿನಲ್ಲಿ ನಿರ್ಮಾಣ ಗೊಂಡಿರುವ 140ಕ್ಕೂ ಅಧಿಕ ಮನೆಗಳಿರುವ ವಸತಿಸಂಕೀರ್ಣಗಳ ಬಬ್ಬುಸ್ವಾಮಿ ಲೇಔಟ್‌ನಲ್ಲಿ ನಿವಾಸಿಗಳು ಅನುಭವಿಸುತ್ತಿರುವ ಜನರ ಮೂಲಭೂತ ಸಮಸ್ಯೆಗಳ ಕುರಿತು ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸರಳೇ ಬೆಟ್ಟು ವಾರ್ಡ್‌ನ ಸದಸ್ಯೆ ವಿಜಯಲಕ್ಷ್ಮೀ ಸಮರ್ಪಕವಾದ ಕುಡಿಯುವ ನೀರು, ರಸ್ತೆ ಸೌಕರ್ಯಗಳಿಲ್ಲದೇ ಸ್ಥಳೀಯರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಸಭೆಯ ಮುಂದೆ ತೆರೆದಿಟ್ಟರು.
ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕೂಡಿಟ್ಟು ಖರೀದಿಸಿದ ಪ್ಲಾಟ್‌ಗಳಲ್ಲಿ ವಾಸಿಸುವ ಬಡ ಜನರು ಅನುಭವಿಸು ತ್ತಿರುವ ಸಂಕಷ್ಟಗಳ ಸರಮಾಲೆಗೆ ಪರಿಹಾರ ಸಿಕ್ಕಿಲ್ಲ. ಅನೇಕ ಬಾರಿ ಅವರು ಪ್ರತಿಭಟನೆ ನಡೆಸಿದರೂ ಇನ್ನೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.
ಶುದ್ಧ ಕುಡಿಯುವ ನೀರಿಗೂ ಪರದಾಡುವ ಅಲ್ಲಿನ ನಿವಾಸಿಗರಿಗೆ ಟ್ಯಾಂಕರ್ ಮೂಲಕವಾದರೂ ನೀರು ಕೊಡೋಣವೆಂದರೆ ಅಲ್ಲಿಗೆ ಸಮರ್ಪಕವಾದ ರಸ್ತೆ ಸಂಪರ್ಕವೇ ಇಲ್ಲ. ಇದಕ್ಕೆ ಧನಿಗೂಡಿಸಿದ ಇತರ ಸದಸ್ಯರು ಇತ್ತೀಚೆಗೆ ವೃದ್ಧರೊಬ್ಬರು ತೀವ್ರ ಅಸೌಖ್ಯಕ್ಕೊಳಗಾದಾಗ ಅವರನ್ನು ಹೊತ್ತುಕೊಂಡೇ ಹೋಗಬೇಕಾಯಿತು ಎಂದರು.
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಅಲ್ಲಿ ಮನೆಗಳನ್ನು ನಿರ್ಮಾಣ ಮಾಡುವ ಮೊದಲು ಸಮರ್ಪಕ ರಸ್ತೆ ಸೌಲಭ್ಯ, ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ, ವಿದ್ಯುತ್ ಮುಂತಾದ ಮೂಲಸೌಕರ್ಯಗಳನ್ನು ನೀಡಲು ಆದ್ಯತೆ ಕೊಡಬೇಕು. ಆದರೆ ಬಬ್ಬುಸ್ವಾಮಿ ಲೇಔಟ್‌ನಲ್ಲಿ ಇದ್ಯಾವುದೂ ಆಗಿಲ್ಲ. ಯಾವುದೇ ಯೋಜನೆ ಜಾರಿಗೆ ಮುನ್ನ ನಗರ ಸಭೆಯ ಬೈಲಾ ದ ಅನುಸಾರ ಸಮರ್ಪಕವಾಗಿ ಎಲ್ಲಾ ಸೌಕರ್ಯ ಒದಗಿಸಬೇಕು. ಇಲ್ಲದಿದ್ದರೆ ಈಗ ನಿವಾಸಿಗರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದರು.
ಕುಡಿಯುವ ನೀರಿನ ಸಮಸ್ಯೆ: ಕಿನ್ನಿಮುಲ್ಕಿ ವಾರ್ಡಿನ ಸದಸ್ಯ ಅಮೃತ ಕೃಷ್ಣಮೂರ್ತಿ ಅವರು ತಮ್ಮ ವಾರ್ಡಿನಲ್ಲಿ ನವೆಂಬರ್ ತಿಂಗಳಲ್ಲೇ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಇಲ್ಲಿ ಸಮಯಕ್ಕೆ ಸರಿಯಾಗಿ ನೀರು ಪೂರೈಕೆಯಾ ಗುತ್ತಿಲ್ಲ ಎಂದು ದೂರಿದರು. ಶೆಟ್ಟಿಗಾರ್ ಕಾಲನಿಯಲ್ಲಿ ಪ್ರತಿದಿನ ನೀರಿಗೆ ಸಮಸ್ಯೆಯಾಗಿದೆ ಎಂದರು. ಅವರ ದೂರಿಗೆ ಇನ್ನಷ್ಟು ಸದಸ್ಯರು ಧ್ವನಿಗೂಡಿಸಿದರು.
ಕಾಂಗ್ರೆಸ್‌ನ ರಮೇಶ್ ಕಾಂಚನ್ ಮಾತನಾಡಿ, ಈಗ ಬಜೆಯಲ್ಲಿ ನೀರಿದೆ. ಆದರೆ ನೀರಿನ ಸರಬರಾಜು ಸರಿಯಾಗಿ ನಡೆಯುತ್ತಿಲ್ಲ. ಸಮಯಕ್ಕೆ ಸರಿಯಾಗಿ ನೀರು ನೀಡುತ್ತಿಲ್ಲ. ರಾತ್ರಿ 2 ಗಂಟೆಗೆ ನೀರು ಬಂದರೆ ಜನರೇನು ಮಾಡಬೇಕು ಎಂದು ಪ್ರಶ್ನಿಸಿದರು.
ವಾರಾಹಿ ಕುಡಿಯುವ ನೀರಿನ ಯೋಜನೆಯವರು ವಾರ್ಡಿನ ಎಲ್ಲೆಂದರಲ್ಲಿ ಹೊಂಡಗಳನ್ನು ತೊಡುತಿದ್ದಾರೆ. ಈ ಬಗ್ಗೆ ವಾರ್ಡಿನ ಸದಸ್ಯೆಯಾದ ತನಗೇ ಯಾವುದೇ ಮಾಹಿತಿ ನೀಡುತ್ತಿಲ್ಲ. ಜನರ ಆಕ್ರೋಶಕ್ಕೆ ನಾವು ಉತ್ತರಿಸಬೇ ಕಾಗುತ್ತದೆ. ಈ ಬಗ್ಗೆ ನಮಗೇ ಮಾಹಿತಿ ಇರುವುದಿಲ್ಲ. ಬೆಳಗ್ಗೆ ನೋಡುವಾಗ ಹೊಂಡಗಳು ಕಾಣಿಸಿಕೊಳ್ಳುತ್ತಿವೆ ಎಂದು ಅಧ್ಯಕ್ಷರಲ್ಲಿ ದೂರಿದರು.
ಈ ಸಂದರ್ಭದಲ್ಲಿ ವಾರಾಹಿ ಕುಡಿಯುವ ನೀರು ಉಡುಪಿಗೆ ಬರುವ ಕುರಿತಂತೆ ಹಲವು ಸದಸ್ಯರು ಪ್ರಶ್ನೆ ಎತ್ತಿದರು. ಮುಂದಿನ ಡಿಸೆಂಬರ್ ವೇಳೆಗೆ ವಾರಾಹಿ ನೀರು ಬರುವ ನಿರೀಕ್ಷೆ ಇದೆ ಎಂದು ಅಧ್ಯಕ್ಷರು ಉತ್ತರಿಸಿದರು. ವಾರಾಹಿ ನೀರಿನ ಪೈಪ್‌ಲೈನ್ ಮೇಲೆ ಜಲಜೀವನ್ ಮಿಷನ್ ಯೋಜನೆಯ ಪೈಪ್‌ಗಳನ್ನು ಕೆಲವು ಕಡೆ ಅಳವಡಿಕೆ ಮಾಡುತ್ತಿರುವ ಕುರಿತಂತೆಯೂ ಮಾಜಿ ಅಧ್ಯಕ್ಷೆ ಸುಮಿತ್ರಾ ನಾಯಕ್ ಸೇರಿದಂತೆ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪೈಪ್‌ಲೈನ್‌ಗೆ ಹಾನಿಯಾದರೆ ಯಾರು ಹೊಣೆ ಎಂದವರು ಪ್ರಶ್ನಿಸಿದರು.
ಹುಚ್ಚುನಾಯಿ, ಬೀದಿನಾಯಿ ಕಾಟ: ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಯಲ್ಲಿ ಹೆಚ್ಚಳ ಹಾಗೂ ಹುಚ್ಚುನಾಯಿಗಳ ಕಾಟದ ಕುರಿತು ಹಲವು ಸದಸ್ಯರು ಪ್ರಶ್ನಿಸಿದರು. ಹುಚ್ಚುನಾಯಿಗಳು ನಗರದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾ ಗುತ್ತಿದೆ, ಜನರು ಇದರ ಬಗ್ಗೆ ಭಯಭೀತರಾಗಿದ್ದಾರೆ ಎಂದು ಅಮೃತ ಕೃಷ್ಣಮೂರ್ತಿ ತಿಳಿಸಿದರು. ಇವುಗಳ ನಿರ್ವಹಣೆ ಹೇಗೆ, ಇವುಗಳನ್ನು ಯಾರು ಹಿಡಿಯಬೇಕು ಎಂದು ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ರೆಡ್ಡಪ್ಪ, ಜಿಲ್ಲೆಯಲ್ಲಿ ಸದ್ಯ 1.18ಲಕ್ಷ ನಾಯಿಗಳಿರುವುದಾಗಿ ಲೆಕ್ಕ ಹಾಕಲಾಗಿದೆ. ಇವುಗಳಿಗೆ ರೇಬಿಸ್ ಚುಚ್ಚುಮದ್ದು ಹಾಕಲು ಸಮಸ್ಯೆ ಇಲ್ಲ. ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ಇದೆ. ಈವರೆಗೆ 48 ಸಾವಿರ ಬೀದಿ ನಾಯಿಗಳಿಗೆ ಲಸಿಕೆ ನೀಡಲಾಗಿದೆ ಎಂದರು. ನಾಯಿಗಳನ್ನು ಹಿಡಿಯಲು ನಮ್ಮಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಜಿಲ್ಲೆಗೆ ಮಂಜೂರಾಗಿರುವ 357 ಹುದ್ದೆಗಳಲ್ಲಿ 71 ಮಂದಿ ಮಾತ್ರ ಪಶುವೈದ್ಯರು ಕರ್ತವ್ಯದಲ್ಲಿದ್ದಾರೆ. ಈಗ 10 ಮಂದಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದಾರೆ ಎಂದರು.
ಪ್ರಾಣಿ ಕಲ್ಯಾಣ ಮಂಡಳಿಯ ನೀತಿನಿಯಮಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಕೇವಲ ಬೀದಿ ನಾಯಿಗಳಿಗೆ ಮಾತ್ರ ನಾವು ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ನೀಡಲು ಅವಕಾಶವಿದೆ ಎಂದರು. ಹುಚ್ಚು ನಾಯಿಗಳ ನಿಯಂತ್ರಣ ಹೇಗೆ ಎಂಬ ಬಗ್ಗೆ ಮಾತ್ರ ಅವರು ಯಾವುದೇ ಮಾಹಿತಿಗಳನ್ನು ನೀಡಲಿಲ್ಲ.
ನಗರದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಅನಧಿಕೃತ ರಿಕ್ಷಾ ನಿಲ್ದಾಣಗಳನ್ನು ತೆರವುಗೊಳಿಸುವಂತೆ ಸದಸ್ಯರು ಆಗ್ರಹಿಸಿ ದರು. ನಗರದಲ್ಲಿ, ವಿಶೇಷವಾಗಿ ಮಣಿಪಾಲದಲ್ಲಿರುವ ಪಾರ್ಕಿಂಗ್ ಸಮಸ್ಯೆ ಕುರಿತು ಬಿಸಿಬಿಸಿ ಚರ್ಚೆ ನಡೆಯಿತು. ನಗರ ದಲ್ಲಿ ನಿಯಮ ಮೀರಿ ತಲೆಎತ್ತುತ್ತಿರುವ ಕಟ್ಟಡಗಳ ನಿಯಂತ್ರಣ, ಜಿಲ್ಲೆಯ ಎಲ್ಲಾ ನಗರ, ಗ್ರಾಮಗಳ ಶೌಚಾಲಯದ ತ್ಯಾಜ್ಯವನ್ನು ಉಡುಪಿಯ ನಿಟ್ಟೂರಿನ ಎಸ್‌ಟಿಪಿಗೆ ತಂದು ಹಾಕುತ್ತಿರುವ ಬಗ್ಗೆ ಆಕ್ಷೇಪಗಳೂ ಕೇಳಿಬಂದವು.
ಶಾಸಕ ಯಶಪಾಲ್ ಸುವರ್ಣ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಪೌರಾಯುಕ್ತ ಡಾ.ಉದಯ ಶೆಟ್ಟಿ ಉಪಸ್ಥಿತರಿದ್ದರು.