ಬೀಡಿ ಎಲೆ ಸಮಸ್ಯೆ ವಿರೋಧಿಸಿ ಪಿಕೆಟಿಪಿ ಕಂಪನಿಗೆ ಮುತ್ತಿಗೆ
ಕಾರ್ಕಳ: ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಹಾಗೂ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘ(ಸಿಐಟಿಯು) ನೇತೃತ್ವದಲ್ಲಿ ಬೀಡಿ ಎಲೆ ಸಮಸ್ಯೆಯನ್ನು ವಿರೋಧಿಸಿ ಇಂದು ಕಾರ್ಕಳದ ಪಿ.ಕೆ.ಟಿ.ಪಿ.(ಟೆಲಿಫೋನ್) ಕಂಪನಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ಹಲವು ಸಮಯದಿಂದ ಬೀಡಿ ಎಲೆ ಹಾಳಾಗಿದ್ದು ಸರಿಪಡಿಸಲು ಹಲವು ಬಾರಿ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೂ ಎಚ್ಚೆತ್ತುಕೊಳ್ಳದ ಕಂಪನಿಯ ವಿರುದ್ಧ ಸಂಘದ ಮುಖಂಡರು ಹಾಗೂ ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಿಡಿಸಿದರು. ಬಳಿಕ ಕಂಪನಿಗೆ ಮುತ್ತಿಗೆ ಹಾಕಿ ಕ್ರಮವನ್ನು ವಿರೋಧಿಸಿದರು.
ನಂತರ ಕಂಪನಿಯ ಮ್ಯಾನೇಜರ್ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ಹಳೆ ಎಲೆ ಖಾಲಿ ಮಾಡಿದ್ದು ಈಗ ಹೊಸ ಎಲೆ ಬಂದಿದೆ. ಅದನ್ನು ಎರಡು ದಿನಗಳಲ್ಲಿ ಕಾರ್ಮಿಕರಿಗೆ ವಿರತರಿಸಲಾಗುವುದು ಎಂದು ಹೇಳಿದರು. ನಂತರ ಸಂಘದ ಮುಖಂಡರು ಹಾಗೂ ಕಾರ್ಮಿಕರು ಎಲೆ ಸಂಸ್ಕರಿಸುವ( ಗೊಡೌನ್) ಸ್ಥಳಕ್ಕೆ ಹೋಗಿ ಪರಿಶಿಲಿಸಿದ ನಂತರ ಪ್ರತಿಭಟನೆಯನ್ನು ವಾಪಸು ಪಡೆಯ ಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್, ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷೆ ಬಲ್ಕೀಸ್, ಕಾರ್ಯದರ್ಶಿ ಉಮೇಶ್ ಕುಂದರ್ ಮಾತನಾಡಿದರು.
ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಮುಖಂಡರಾದ ನಳಿನಿ ಎಸ್., ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಸುನಿತಾ ಶೆಟ್ಟಿ, ಕೋಶಾಧಿಕಾರಿ ಸುಮತಿ, ಮುಖಂಡರಾದ ಜಯಂತಿ, ಅನಿತಾ, ಶಕುಂತಲಾ, ಮಾಲತಿ, ಸಿಐಟಿಯು ಕಾರ್ಕಳ ತಾಲೂಕು ಮುಖಂಡ ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.