ಆಧುನಿಕತೆ ಯಕ್ಷಗಾನ ಕಲೆಗೆ ಮಾರಕವಾಗಿಲ್ಲ: ಡಾ.ವಿಜಯ ಬಲ್ಲಾಳ್

Update: 2024-12-11 15:24 GMT

ಉಡುಪಿ: ಯಕ್ಷಗಾನ ಕಲೆ ಎಲ್ಲಾ ಏರುಪೇರುಗಳನ್ನು ಎದುರಿಸಿ ದರೂ ಗಟ್ಟಿಯಾಗಿ ಬೆಳೆದು ನಿಂತಿದೆ. ಹವ್ಯಾಸಿ ಬಳಗ, ವೃತ್ತಿ ಮೇಳ ಕಲಾವಿದರು ಒಟ್ಟು ಸೇರಿ ಈ ಕಲೆಯನ್ನು ಬೆಳೆಸಿದ್ದಾರೆ. ಮೊಬೈಲ್ ಯುಗದಲ್ಲೂ ಯಕ್ಷಗಾನಕ್ಕೆ ತನ್ನದೇ ಆದ ಪ್ರೇಕ್ಷಕ ವೃಂದವಿರುವುದು ಈ ಕಲೆಯ ಉಳಿವು ಬೆಳವಣಿಗೆಗೆ ಪೂರಕವಾಗಿದೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಹೇಳಿದ್ದಾರೆ.

ಕೊಡವೂರು ಶಂಕರ ನಾರಾಯಣ ದೇವಳದ ವಸಂತ ಮಂಟಪದಲ್ಲಿ ರವಿವಾರ ನಡೆದ ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್‌ನ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಜನಾಕರ್ಷಣೆಗಾಗಿ ಕೆಲವರು ಯಕ್ಷಗಾನದಲ್ಲಿ ಕೆಲವೊಂದು ಬದಲಾವಣೆ ಗಳನ್ನು ತಂದರೂ, ಜನ ಸ್ವೀಕರಿಸಿಲ್ಲ. ಹೀಗಾಗಿ ಪರಂಪರಾಗತ ಯಕ್ಷಗಾನ ಕಲೆಗೆ ಅಳವಿಲ್ಲ. ಇದು ಈ ಕಲೆಯ ಶ್ರೇಷ್ಠತೆ. ಇದು ನೂರಾರು ಮಂದಿಯ ಜೀವಾನಾಧಾರ ವಾಗಿರುವುದು ಹೌದು ಎಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಯಕ್ಷಗಾನದಂತಹ ಕಲೆ ಪೀಳಿಗೆಯಿಂದ ಪೀಳಿಗೆಗೆ ದಾಟುತ್ತಿರುವುದಕ್ಕೆ ಈ ವೇದಿಕೆ ಸಾಕ್ಷಿಯಾಗಿದೆ. ಯಕ್ಷಗಾನ ಕಲಾವಿದರಿಗೆ ಇಂದು ಉತ್ತಮ ಸಂಭಾವನೆ, ಪ್ರೋತ್ಸಾಹ ಸಿಗುತ್ತಿದೆ. ಈ ಸಂದರ್ಭದಲ್ಲಿ ಕಲಾವಿದರು ಮೈಮರೆಯಬಾರದು. ತಮ್ಮ ಪಾತ್ರದ ಘನತೆಗೆ ತಕ್ಕಂತೆ ಹಾವಭಾವ, ಮಾತುಗಳನ್ನಾಡಬೇಕು ಎಂದು ತಿಳಿಸಿದರು.

ಯಕ್ಷ ಸಂಘಟಕ ಭುವನಪ್ರಸಾದ್ ಹೆಗ್ಡೆ ಮಾತನಾಡಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಯಕ್ಷಗಾನ ಗುರು ಪ್ರಭಾಕರ ಆಚಾರ್ಯ ಇಂದ್ರಾಳಿ ಮಾತನಾಡಿದರು. ಈ ಸಂದರ್ಭದಲ್ಲಿ ಯಕ್ಷಗಾನ ಗುರು ಪ್ರಭಾಕರ ಆಚಾರ್ಯ ಇಂದ್ರಾಳಿ ಅವರಿಗೆ ‘ಯಕ್ಷ ಆರಾಧನಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್‌ನ ಟ್ರಸ್ಟಿಗಳಾದ ಕೆ.ಜೆ.ಗಣೇಶ್, ಕೆ.ಜೆ.ಕೃಷ್ಣ ಹಾಗೂ ಕೆ.ಜೆ.ಸುಧೀಂದ್ರ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಟ್ರಸ್ಟ್‌ನಿಂದ ಶಿಕ್ಷಣ ಪಡೆದ ಸದಸ್ಯರಿಂದ ’ಶಿವ ಪಂಚಾಕ್ಷರಿ ಮಹಿಮೆ’ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News