ಸರಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಕೊರಗರಿಗೆ ಕರೆ

Update: 2024-12-11 16:21 GMT

ಬ್ರಹ್ಮಾವರ, ಡಿ.11: ಕರಾವಳಿಯ ಮೂಲನಿವಾಸಿಗಳಾದ ಕೊರಗ ಸಮುದಾಯದ ಅಭಿವೃದ್ಧಿಗಾಗಿ ಸರಕಾರ ಹಲವು ಯೋಜನೆಗಳು, ಕಾರ್ಯಕ್ರಮಗಳನ್ನು ಘೋಷಿಸಿದೆ. ಅವುಗಳ ಪ್ರಯೋಜನವನ್ನು ಸಮುದಾಯದವರು ಪಡೆದುಕೊಂಡು ಸಮಾಜದಲ್ಲಿ ಮುಂದೆ ಬರುವಂತಾಗ ಬೇಕು ಎಂದು ಬ್ರಹ್ಮಾವರದ ಉಪತಹಶೀಲ್ದಾರ್ ರಾಮಚಂದ್ರ ಹೇಳಿದ್ದಾರೆ.

ತಾಲೂಕಿನ ಹಂದಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ - ಕೇರಳ ವತಿಯಿಂದ ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ, ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲಿನ ಹಿಂಸೆ ಹಾಗೂ ದೌರ್ಜನ್ಯದ ವಿರುದ್ಧ ನಡೆದ ಆಂದೋಲನದಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಸಂಘಟನೆಯ ಮುಖಾಂತರ ಕಚೇರಿಗಳಿಗೆ ಭೇಟಿ ನೀಡಿ ಸರಕಾರದ ಯೋಜನೆಗಳನ್ನು ಪಡೆದುಕೊಂಡು ಸಾಮಾಜೀಕರಣ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ರಾಮಚಂದ್ರ ಸಲಹೆ ನೀಡಿದರು.

ಬ್ರಹ್ಮಾವರ ತಾಲೂಕು ಪಂಚಾಯತ್‌ನ ಕಾರ್ಯನಿರ್ವಹಣಾಧಿಕಾರಿ ಎಚ್.ವಿ ಇಬ್ರಾಹಿಂಪೂರ್ ಅವರು ಮಾತನಾಡಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಸಮಾಜದಲ್ಲಿ ಅರಿವು ಮೂಡಿಸುವಂತೆ ಕರೆ ನೀಡಿದರು. ಹಂದಾಡಿ ಗ್ರಾಪಂ ಅಧ್ಯಕ್ಷೆ ಶೋಭಾ ಪೂಜಾರಿ ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆಯ ಅಂಗವಾಗಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ, ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಕೊರಗರ ಸಾಮಾಜಿಕ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡಿದರು. ಡಾ.ಅಂಬೇಡ್ಕರ್ ನೀಡಿದ ಭಾರತ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಸಮಾನ ಅವಕಾಶ ಮತ್ತು ಹಕ್ಕು ಗಳನ್ನು ಪಡೆದಿದ್ದು, ಜಾತಿ, ಲಿಂಗ, ಧರ್ಮದ ಆಧಾರದಲ್ಲಿ ಯಾವುದೇ ರೀತಿಯ ಶೋಷಣೆಗಳನ್ನು ಮಾಡಲು ಅವಕಾಶವಿಲ್ಲ ಎಂದು ವಿವರಿಸಿದರು.

ಇವುಗಳಿಗೆ ಚ್ಯುತಿಯಾದಲ್ಲಿ ಕಾನೂನಿನ ಮೊರೆ ಹೋಗಬಹುದಾಗಿದೆ. ಅವುಗಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷೆಯನ್ನು ನೀಡುವ ಮೂಲಕ ಮಾನವ ಹಕ್ಕುಗಳ ಸಂರಕ್ಷಣೆ ಮಾಡಬಹುದು. ಜಾತಿ, ಲಿಂಗ ಧರ್ಮದ ಆಧಾರದಲ್ಲಿ ಯಾವುದೇ ರೀತಿಯ ದೌರ್ಜನ್ಯ ನಡೆಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಸಾಮಾಜಿಕಸ್ಥರದಲ್ಲಿ ಅತ್ಯಂತ ಕೆಳಸಮುದಾಯವಾದ ಕೊರಗ ಸಮುದಾಯ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸಮಸ್ಯೆ ಗಳು ಹಾಗೂ ಪಿಡುಗಿನ ವಿರುದ್ಧ ಹೋರಾಡುತಿದ್ದು, ಆದರೆ ಅನೇಕ ರೀತಿಯ ಸಮಸ್ಯೆಗಳನ್ನು ಸಮಾಜದ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಅನುಭವಿಸುತಿದ್ದಾರೆ. ಇಂತ ಜಾಗೃತಿ ಕಾರ್ಯಕ್ರಮದ ಮೂಲಕ ಲೈಂಗಿಕ ದೌರ್ಜನ್ಯವನ್ನು ಪ್ರತಿಭಟಿಸುವ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಸಮಾರೋಪ ಸಮಾರಂಭದಲ್ಲಿ ದಿವಾಕರ ಕಳ್ತೂರು ಅತಿಥಿಗಳನ್ನು ಸ್ವಾಗತಿಸಿದರೆ, ವಿಮಲಾ ಕಳ್ತೂರು ಕಾರ್ಯಕ್ರಮ ನಿರೂಪಿಸಿದರು. ಬೊಗ್ರ ಕೊಕ್ಕರ್ಣೆ ಪ್ರಾಸ್ತಾವಿಕವಾಗಿ ಮಾತನಾಡಿ1998ರಿಂದ ಪ್ರಾರಂಭವಾಗಿರುವ ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ ಇತಿಹಾಸವನ್ನು ವಿವರಿಸಿದರು. ಒಕ್ಕೂಟದ ಖಜಾಂಚಿ ವಿನಯ ಅಡ್ವೆ ವಂದಿಸಿದರು.

ಇದಕ್ಕೆ ಮೊದಲು ಬ್ರಹ್ಮಾವರ ಬಸ್ಸು ನಿಲ್ದಾಣದಿಂದ ಹಂದಾಡಿ ಗ್ರಾಮ ಪಂಚಾಯತ್‌ವರೆಗೆ ಡೋಲು ವಾದನದ ಜೊತೆಗೆ ಕಾಲ್ನಡಿಗೆ ಜಾಥವನ್ನು ನಡೆಸಲಾಯಿತು. ಜಾಥವನ್ನು ಹಂದಾಡಿ ಗ್ರಾಪಂ ಅಧ್ಯಕ್ಷರಾದ ಶೋಭಾ ಪೂಜಾರಿ ಉದ್ಘಾಟಿಸಿದರು. ಪುತ್ರನ್ ಹೆಬ್ರಿ ಜಾಥದ ಉದ್ದೇಶವನ್ನು ತಿಳಿಸಿದರು.





 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News