ಗಂಗೊಳ್ಳಿ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು: ವಿಜಯೋತ್ಸವ
ಕುಂದಾಪುರ, ಡಿ.14: ಕಳೆದ 27 ವರ್ಷಗಳಿಂದ ಗಂಗೊಳ್ಳಿಯಲ್ಲಿ ಬಿಜೆಪಿ ಮತ್ತು ಜನತಾದಳ ಕಾಲ ಅಧಿಕಾರ ನಡೆಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಗಂಗೊಳ್ಳಿಯ ಮತದಾರರು ಯಾವುದೇ ಅಪಪ್ರಚಾರಕ್ಕೆ ಬೆಲೆ ಕೊಡದೆ ಎಲ್ಲಾ ವರ್ಗದ ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆಯನ್ನಿಟ್ಟು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.
ಗಂಗೊಳ್ಳಿಯ ಪೋರ್ಟ್ ಆಫೀಸಿನ ಬಳಿ ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಅಭಿನಂದಿಸಿ, ವಿಜಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಗಂಗೊಳ್ಳಿ ಬೈಂದೂರು ಕ್ಷೇತ್ರಕ್ಕೆ ಸೇರ್ಪಡೆಗೊಂಡ ಬಳಿಕ ಅನೇಕ ಚುನಾವಣೆ ಎದುರಿಸಿದ್ದರೂ ಮತದಾರರನ್ನು ಸಂಘಟಿ ಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಗಂಗೊಳ್ಳಿಯ ಹಿತಕ್ಕಾಗಿ, ಅಭಿವೃದ್ಧಿಗೋಸ್ಕರ, ಸೌಹಾರ್ದತೆಗೋಸ್ಕರ ಸಮಾನ ಮನಸ್ಕರ ಒಕ್ಕೂಟ ರಚಿಸಿ ಚುನಾವಣೆಗೆ ಹೋದಾಗ ಎಲ್ಲಾ ವರ್ಗದ ಜನರು ಇದನ್ನು ಬೆಂಬಲಿಸಿ ಮತವನ್ನು ಹಾಕಿ ಅಧಿಕಾರ ನೀಡಿದ್ದಾರೆ. ಇದರಿಂದ ಸಮಾನ ಮನಸ್ಕ ಒಕ್ಕೂಟದ ಅಭ್ಯರ್ಥಿಗಳು ಬಹುಮತದೊಂದಿಗೆ ಗೆದ್ದು ಗಂಗೊಳ್ಳಿ ಗ್ರಾಪಂನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ ಎಂದರು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ, ಬೈಂದೂರು ಬ್ಲಾಕ್ ಅಧ್ಯಕ್ಷ ಅರವಿಂದ ಪೂಜಾರಿ, ಶರತ್ ಕುಮಾರ್ ಶೆಟ್ಟಿ, ಪಕ್ಷದ ಮುಖಂಡರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಅನಂತ ಮೊವಾಡಿ, ಎಸ್‌ಡಿಪಿಐನ ಹನೀಫ್, ಹಸೈನಾರ್, ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಹರೀಶ್ ಕೊಡಪಾಡಿ, ಹರೀಶ್ ತೋಳಾರ್, ಗಂಗೊಳ್ಳಿ ಗ್ರಾಪಂ ನೂತನ ಸದದ್ಯರು, ಪಕ್ಷದ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.
ನಾಯಕವಾಡಿಯಿಂದ ಗಂಗೊಳ್ಳಿ ಬಂದರು ಪೋರ್ಟ್ ಆಫೀಸಿನ ತನಕ ಮುಖ್ಯ ರಸ್ತೆಯಲ್ಲಿ ಗ್ರಾಪಂ ಸದಸ್ಯರ ವಿಜಯೋತ್ಸವದ ಮೆರವಣಿಗೆ ಸಾಗಿತು.