ಮಣಿಪಾಲ: ಗಾಂಧಿಯನ್ ಸೆಂಟರ್‌ನ ದಶಮಾನೋತ್ಸವಕ್ಕೆ ಚಾಲನೆ

Update: 2024-12-14 15:13 GMT

ಉಡುಪಿ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ನ ದಶಮಾನೋತ್ಸವ ಆಚರಣೆಗೆ ಮಾಹೆಯ ಪ್ರೊಚಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ್ ಶನಿವಾರ ಚಾಲನೆ ನೀಡಿದರು.

ಸಂಸ್ಥೆಯ ನೂತನ ನ್ಯೂಲಿಬರಲ್ ಆರ್ಟ್ಸ್ ಅ್ಯಂಡ್ ಸೋಶಿಯಲ್ ಸೈನ್ಸಸ್ ಕಟ್ಟಡದ ಎರಡನೆ ಮಹಡಿಯ ಜಿಸಿಪಿಎಎಎಸ್ ಸರ್ವೋದಯ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಬಲ್ಲಾಳ್, ಗಾಂಧೀಜಿ ಅವರ ತತ್ವಾದರ್ಶ ಗಳ ಸಹಿತ ಸಾಮಾಜಿಕ ಚಿಂತನೆಗಳ ನೆಲೆಗಟ್ಟಿನಲ್ಲಿ ಕೇಂದ್ರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಶ್ಲಾಘಿಸಿದರು.

ಮಾಹೆಯ ಕುಲಪತಿ ಲೆ.ಜ. ಡಾ.ಎಂ.ಡಿ. ವೆಂಕಟೇಶ್ ಮಾತನಾಡಿ, ಗಾಂಧೀಯನ್ ಸೆಂಟರ್ ಅಂತರ್‌ಶಿಸ್ತೀಯ ಕಾರ್ಯ ಕ್ರಮಗಳ ಕೇಂದ್ರ ವಾಗಿದ್ದು ವಿಶ್ವವಿದ್ಯಾಲಯ ಇದರ ಪರಿಪೂರ್ಣತೆಗಾಗಿ ಎಲ್ಲಾ ರೀತಿಯ ನೆರವನ್ನೂ ಒದಗಿಸುತ್ತಿದೆ ಎಂದರು.

ಚಿತ್ತೂರು ಅಪೋಲೋ ವಿಶ್ವವಿದ್ಯಾನಿಲಯದ ಕುಲಪತಿ ಡಾ. ವಿನೋದ್ ಭಟ್, ಗಾಂಧೀಯನ್ ಸೆಂಟರ್‌ನೊಂದಿಗಿನ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದರಲ್ಲದೇ, ಯುವ ಜನತೆ ಗಾಂಧಿ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಾ.ಭ್ರಮರಿ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಮರ್ಶಕ ಪ್ರೊ.ಮನು ಚಕ್ರವರ್ತಿ, ಬರಹಗಾರ, ರಂಗಕರ್ಮಿ ಮಹೇಶ್ ದತ್ತಾನಿ, ಮಾಧ್ಯಮ ಶಿಕ್ಷಣ ತಜ್ಞ ಪ್ರೊ. ಬುರೋಶಿವ ದಾಸ್‌ಗುಪ್ತ, ಟರ್ಕಿಯ ಪ್ರೊ. ಗುರ್ಬುಜ್ ಅಕ್ತಾಸ್ ಮತ್ತು ಎಡಿನ್‌ಬರ್ಗ್ ನೇಪಿಯರ್ ವಿಶ್ವವಿದ್ಯಾಲಯದ ಪ್ರೊ. ಬಾಷಬಿ ಫ್ರೇಸರ್ ವಿಶೇಷ ಉಪನ್ಯಾಸಗಳನ್ನು ನೀಡಿದರು.

ಗಾಂಧಿಯನ್ ಸೆಂಟರ್‌ನ ದಶಮಾನೋತ್ಸವದ ಅಂಗವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರದರ್ಶನವನ್ನು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಪುಸ್ತಕ ಪ್ರದರ್ಶನದ ಜೊತೆಗೆ ಮಾರಾಟವೂ ಇದ್ದು, ಇಂಗ್ಲಿಷ್ ಹಿಂದಿ, ತೆಲುಗು ಪುಸ್ತಕಗಳೊಂದಿಗೆ ಅಕಾಡೆಮಿ ಪ್ರಕಟಿತ ಕನ್ನಡ ಭಾಷೆಯ ಪುಸ್ತಕಗಳು ಪ್ರದರ್ಶನದಲ್ಲಿವೆ. ಡಿ.14ರಿಂದ 16ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಪ್ರದರ್ಶನ ಇರಲಿದೆ.

ನಾಳೆ ಬೆಳಗ್ಗೆ ಕೇಂದ್ರದ ಹಳೇ ವಿದ್ಯಾರ್ಥಿಗಳ ಸಮ್ಮಿಲನ ನಡೆಯಲಿದೆ. ದೇಶ, ವಿದೇಶಗಳಲ್ಲಿರುವ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಮಾಹೆಯ ಹಳೆಯ ವಿದ್ಯಾರ್ಥಿ ಸಂಘಟನೆಯ ನಿರ್ದೇಶಕ ಡಾ. ರೋಹಿತ್ ಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರೊ.ಹಿರೇಗಂಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News