ಉಡುಪಿ ಲೋಕ ಅದಾಲತ್| ರಾಜಿಯಲ್ಲಿ ಆಸ್ತಿ ವಿವಾದ ಬಗೆಹರಿಸಿಕೊಂಡ ಹಿರಿಯ ನಾಗರಿಕರು

Update: 2024-12-14 16:07 GMT

ಉಡುಪಿ, ಡಿ.14: ಉಡುಪಿ ನ್ಯಾಯಾಲಯದಲ್ಲಿ ಇಂದು ನಡೆದ ಈ ವರ್ಷದ ಕೊನೆಯ ಲೋಕ ಅದಾಲತ್‌ನಲ್ಲಿ 81 ವರ್ಷ ಪ್ರಾಯದ ಹಿರಿಯ ನಾಗರಿಕರೊಬ್ಬರು ತಮ್ಮ ಸಹೋದರರು ಸೇರಿದಂತೆ ಇತರರ ವಿರುದ್ಧದ ಆಸ್ತಿ ವಿವಾದವನ್ನು ರಾಜಿ ಯಲ್ಲಿ ಸೌಹಾರ್ದಯುತವಾಗಿ ಬಗೆಹರಿಸಿಕೊಂಡ ಘಟನೆಗೆ ನ್ಯಾಯಾಲಯ ಸಾಕ್ಷಿಯಾಯಿತು.

ಗಾಲಿಕುರ್ಚಿಯಲ್ಲಿ ಕುಳಿತು ಲೋಕಅದಾಲತ್‌ಗೆ ಆಗಮಿಸಿದ 81 ವರ್ಷ ಪ್ರಾಯದ ಕೃಷ್ಣಪ್ಪ ಯಾನೆ ಕುಷ್ಟಪ್ಪ ಶೆಟ್ಟಿ, ತನ್ನ ಸಹೋದರರಾದ 80 ವರ್ಷ ಪ್ರಾಯದ ಮಹಾಬಲ ಶೆಟ್ಟಿ ಹಾಗೂ ಇತರ ವಿರುದ್ಧ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿದ್ದರು.

ಕೃಷ್ಣ ಶೆಟ್ಟಿ ಯಾನೆ ಕುಷ್ಟಪ್ಪ ಶೆಟ್ಟಿ ಅವರು ತನ್ನ 20 ಮಂದಿ ಸಂಬಂಧಿಕರ ವಿರುದ್ಧ ಆಸ್ತಿ ವಿಭಾಗ ಕೋರಿ ದಾವೆಯನ್ನು ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ಉಡುಪಿಯಲ್ಲಿ ಸಲ್ಲಿಸಿದ್ದರು. ಈ ದಾವೆಯನ್ನು ರಾಜಿ ಮೂಲಕ ಇತ್ಯರ್ಥ ಪಡಿಸುವಲ್ಲಿ ದಾವೆದಾರರ ಪರ ವಕೀಲರಾದ ಎಂ.ಮನೋಹರ ಶೆಟ್ಟಿ ಹಾಗೂ ಪ್ರತಿವಾದಿ ಪರ ವಕೀಲರಾದ ಎಚ್.ರಾಘ ವೇಂದ್ರ ಶೆಟ್ಟಿ ಅವರ ಪರಿಶ್ರಮ ಶ್ಲಾಘನೀಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾದ ಕಿರಣ್ ಎಸ್.ಗಂಗಣ್ಣನವರ್ ಸಂತೋಷ ವ್ಯಕ್ತಪಡಿಸಿದರು.

ಹಿರಿಯ ನಾಗರಿಕರಾದ ವಾದಿ ಮತ್ತು ಪ್ರತಿವಾದಿಗಳು ಈ ಇಳಿ ವಯಸ್ಸಿನಲ್ಲಿ ರಾಜಿ ಸಂಧಾನದ ಮೂಲಕ ಲೋಕ ಅದಾಲತ್‌ನಲ್ಲಿ ದಾವೆ ಇತ್ಯರ್ಥ ಪಡಿಸಿಕೊಂಡಿರುವುದು ಉಳಿದ ಕಕ್ಷಿದಾರರಿಗೆ ತಮ್ಮ ವ್ಯಾಜ್ಯವನ್ನು ಇದೇ ರೀತಿ ರಾಜಿಯಲ್ಲಿ ಇತ್ಯರ್ಥ ಪಡಿಸಿಕೊಳ್ಳಲು ಮಾದರಿಯಾಗಲಿ ಎಂದವರು ಹಾರೈಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಜೀತು ಆರ್.ಎಸ್., ವಕೀಲರಾದ ಮಿಥುನ್ ಕುಮಾರ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಪಿ.ಆರ್.ಉಪಸ್ಥಿತರಿದ್ದರು.

30,000 ಕೇಸು ಇತ್ಯರ್ಥ: ಇಂದಿನ ಲೋಕ ಅದಾಲತ್‌ನಲ್ಲಿ ಒಟ್ಟು 31,907 ಪ್ರಕರಣಗಳನ್ನು ವಿಚಾರಣೆಗಾಗಿ ಕೈಗೆತ್ತಿಕೊಂಡಿದ್ದು ಇವುಗಳಲ್ಲಿ 30,302 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಒಟ್ಟು 19.50 ಕೋಟಿ ರೂ.ಗಳನ್ನು ಪರಿಹಾರ ರೂಪದಲ್ಲಿ ನೀಡಲಾಗಿದೆ ಎಂದು ತಿಳಿದುಬಂದಿದೆ.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News