ಯಕ್ಷಗಾನ ಜೀವನ ಮೌಲ್ಯ ಕಲಿಸುತ್ತದೆ: ಪುತ್ತಿಗೆಶ್ರೀ

Update: 2024-12-14 16:09 GMT

ಉಡುಪಿ, ಡಿ.14: ಕಲೆ ಸಾಹಿತ್ಯದಿಂದ ಜೀವನದಲ್ಲಿ ಲವಲವಿಕೆ ಇರುತ್ತದೆ. ಯಕ್ಷಗಾನ ಒಂದು ಪರಿಪೂರ್ಣ ಕಲಾಪ್ರಕಾರ. ಇದು ಮಕ್ಕಳ ಸರ್ವತೋ ಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಹೇಳಿದ್ದಾರೆ.

ಯಕ್ಷಶಿಕ್ಷಣ ಟ್ರಸ್ಟ್ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದ್ದ 15 ದಿನಗಳ ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡುತಿದ್ದರು.

ಪುತ್ತಿಗೆ ಕಿರಿಯ ಶ್ರೀಪಾದರಾದ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಮಾತನಾಡಿ, ಮಕ್ಕಳಿಗೆ ಪುರಾಣ ಕಥೆಗಳನ್ನು ತಿಳಿಯು ವುದಕ್ಕೆ ಇದು ಅತ್ಯುತ್ತಮ ಮಾರ್ಗವಾಗಿದೆ ಎಂದರು.

ಯಕ್ಷಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಶಿಕ್ಷಣ ತಜ್ಞರಾದ ಡಾ. ಅಶೋಕ್ ಕಾಮತ್, ಯಕ್ಷಗಾನದ ಪೋಷಕರಾದ ಎಂ.ಸಿ. ಕಲ್ಕೂರ, ತೆಂಕುತಿಟ್ಟು ಯಕ್ಷಗಾನವನ್ನು ಮಕ್ಕ ಳಲ್ಲಿ ಬೆಳೆಸುತ್ತಿರುವ ಗೋಪಿಕಾ ಮಯ್ಯ ಇವರು ಮಾತನಾಡಿದರು. ವೇದಿಕೆಯಲ್ಲಿ ಯಕ್ಷಶಿಕ್ಷಣದ ಟ್ರಸ್ಟಿಗಳಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.

ನವೆಂಬರ್ 30 ರಿಂದ ಡಿಸೆಂಬರ್ 14ರ ವರೆಗೆ ನಡೆದ ಈ ಅಭಿಯಾನದಲ್ಲಿ 27 ಪ್ರೌಢಶಾಲೆಗಳ 293 ಬಾಲಕರು, 507 ಬಾಲಕಿಯರು ಸೇರಿ ಒಟ್ಟು 800 ದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ 228 ಹೊರ ಜಿಲ್ಲೆ, 7 ಹೊರ ರಾಜ್ಯ, 2 ಕ್ರಿಶ್ಚಿಯನ್ ಹಾಗೂ 5 ಮುಸ್ಲಿಂ ವಿದ್ಯಾರ್ಥಿ ವೇಷ ಧರಿಸಿ ಕುಣಿದಿದ್ದರು.

ಈ ಸಂದರ್ಭದಲ್ಲಿ ಪಾಲ್ಗೊಂಡ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಪ್ರಮಾಣ ಪತ್ರ ಹಾಗೂ ಗುಂಪು ಫೋಟೊಗಳನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡಲಾಯಿತು. ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಜಾಹ್ನವಿ, ಶ್ರೀಧರ್ ಪೂಜಾರಿ, ಯಶಸ್ವಿ ನಾಯಕ್ ಹಾಗೂ ಮೇಧಾ ಭಟ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಆರಂಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಯಕ್ಷಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಡಿ.15ರಿಂದ ಶಿರ್ವ ಮತ್ತು ಸಾಲಿಗ್ರಾಮದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ ಆರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News