ಬಿಜೆಪಿಗೆ ಅಧಿಕಾರಕ್ಕೇರಲು ಮಾತ್ರ ಸಂವಿಧಾನ ಸೀಮಿತ: ವಿನಯ ಕುಮಾರ್ ಸೊರಕೆ
ಉಡುಪಿ: ಸಂಸತ್ ಅಧಿವೇಶನದಲ್ಲಿ ಡಾ.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾನಹಾನಿ ಪದಬಳಕೆ ಮಾಡಿರುವ ಸಿ.ಟಿ.ರವಿ ವಿರುದ್ಧ ಉಡುಪಿ ಕಾಂಗ್ರೆಸ್ ಎಸ್‌ಸಿ ಘಟಕ ಮತ್ತು ಮಹಿಳಾ ಕಾಂಗ್ರೆಸ್ ವತಿಯಿಂದ ಬ್ರಹ್ಮಗಿರಿ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿತ್ತು.
ಬ್ರಹ್ಮಗಿರಿಯ ಕಾಂಗ್ರೆಸ್ ಭವನದಿಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಅಂಬೇಡ್ಕರ್ ಭಾವಚಿತ್ರ ಹಿಡಿದು ಕೊಂಡು ಬ್ರಹ್ಮಗಿರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಸಿಟಿ ರವಿ ಹಾಗೂ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸ ಲಾಯಿತು.
ಬಳಿಕ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ದೇಶದ ಗೃಹ ಸಚಿವರೇ ಅಂಬೇಡ್ಕರ್ ಅವರನ್ನು ಅವಮಾನಿಸಿರುವುದು ಇಡೀ ದೇಶವೇ ತಲೆತಗ್ಗಿಸುವ ವಿಚಾರ. ಬಿಜೆಪಿಯವರಿಗೆ ಕೇವಲ ಅಧಿಕಾರ ಪಡೆಯಲು ಮಾತ್ರ ಸಂವಿಧಾನ ಬೇಕು. ಆದರೆ ಅಂಬೇಡ್ಕರ್ ಬಗ್ಗೆ ಇವರಿಗೆ ತಿರಸ್ಕಾರ ಮನೋಭಾವ ಇದೆ. 145ಕೋಟಿ ಜನಸಂಖ್ಯೆ ಇರುವ ಈ ದೇಶ ಇಷ್ಟು ವರ್ಷಗಳ ಕಾಲ ಉಳಿಯಲು ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣ ಎಂದರು.
ಅಮಿತ್ ಶಾ ವಿರುದ್ಧ ಹಳ್ಳಿಹಳ್ಳಿಗಳಲ್ಲಿ ಪ್ರತಿಭಟನೆ ನಡೆಸಿ ಜನಜಾಗೃತಿ ಮೂಡಿಸಿ ಬಿಜೆಪಿಯ ನಿಜ ಬಣ್ಣ ಬಯಲು ಮಾಡಲಾಗುವುದು. ದೇಶದ್ರೋಹದ ಕೆಲಸ ಮಾಡಿರುವ ಅಮಿತ್ ಶಾ ವಿರುದ್ಧ ತಕ್ಷಣ ಶಿಸ್ತು ಕ್ರಮ ಜರಗಿಸಿ, ಗೃಹ ಸಚಿವ ಸ್ಥಾನದಿಂದ ವಜಾ ಗೊಳಿಸಬೇಕು. ಅದೇ ರೀತಿ ಸಿಟಿ ರವಿ ವಿರುದ್ಧವೂ ಕಾನೂನು ಕ್ರಮ ಜರಗಿಸಬೇಕೆಂದು ಅವರು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಪ್ರಸಾದ್‌ರಾಜ್ ಕಾಂಚನ್ ಮಾತನಾಡಿದರು. ಕಲಾವಿದ ಶಂಕರ್‌ದಾಸ್ ಚೇಂಡ್ಕಳ ಅಂಬೇಡ್ಕರ್ ಗೀತೆ ಹಾಡಿದರು.
ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಹರೀಶ್ ಕಿಣಿ, ಗೀತಾ ವಾಗ್ಳೆ, ಜ್ಯೋತಿ ಹೆಬ್ಬಾರ್, ನವೀನ್ ಚಂದ್ರ ಶೆಟ್ಟಿ, ಡಾ.ಸುನೀತಾ ಶೆಟ್ಟಿ, ವಿಶ್ವಾಸ್ ಅಮೀನ್, ದಿನಕರ ಹೇರೂರು, ಹಬೀಬ್ ಅಲಿ, ಅಬ್ದುಲ್ ಅಝೀಝ್, ಇಸ್ಮಾಯಿಲ್ ಆತ್ರಾಡಿ ಮೊದಲಾದವರು ಉಪಸ್ಥಿತರಿದ್ದರು.