ಹಿರಿಯ ನಾಗರಿಕರು ಸಮಾಜದ ಆಸ್ತಿ: ಜಯಕರ ಶೆಟ್ಟಿ ಇಂದ್ರಾಳಿ
ಉಡುಪಿ, ಡಿ.20: ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ವತಿಯಿಂದ 2023-24ನೇ ಸಾಲಿನಲ್ಲಿ 80ವರ್ಷ ಪೂರೈಸಿದ ಹಿರಿಯ ನಾಗರಿಕರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಗುರುವಾರ ಉಡುಪಿ ಪುರಭವನದ ಮಿನಿ ಸಭಾಂಗಣ ದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಡಗಬೆಟ್ಟು ಕ್ರೆಡಿಟ್‌ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಹಿರಿಯ ನಾಗರಿಕರು ನಮ್ಮ ಸಮಾಜದ ಆಸ್ತಿ. ಅವರ ಅನುಭವ ಮತ್ತು ಮಾರ್ಗದರ್ಶನ ಅಮೂಲ್ಯ ವಾದುದು. ಹಿರಿಯ ನಾಗರಿಕರು ಸಮಾಜಮುಖಿ ಕಾರ್ಯಕ್ರಮ ಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಕ್ರೀಯಾಶೀಲರಾಗಿ ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಳೆಯಲು ಸಾಧ್ಯ ಎಂದು ಹೇಳಿದರು.
ಉಡುಪಿ ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಮಾತನಾಡಿ, ಹಿರಿಯ ನಾಗರಿಕರು 60ವರ್ಷ ವಯಸ್ಸಿನವರೆಗೆ ಕುಟುಂಬದ ಜವಾಬ್ದಾರಿ ಹೊತ್ತು ಇಳಿವಯಸ್ಸು ಎಂಬ ಭ್ರಮೆಗೆ ಒಳಗಾಗದೆ ಮನೆಯಲ್ಲಿ ಒಂಟಿಯಾಗಿ ಕೂರದೆ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು. ಆ ಮೂಲಕ ತಮ್ಮ ಅಮೂಲ್ಯಜ್ಞಾನ ಮತ್ತು ಅನುಭವವನ್ನು ಬಳುವಳಿಯಾಗಿ ಕೊಡುವ ಹೊಣೆ ಹೊರಬೇಕು. ಇದರಿಂದ ಜೀವನ ಸಾರ್ಥಕತೆ ಪಡೆಯಲು ಸಾಧ್ಯವಿದೆ ಎಂದರು.
ಟೀಚರ್ಸ್ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಪ್ರಮೋದ್ ಹೆಗ್ಡೆ, ಉಡುಪಿ ಜಿಲ್ಲಾ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಎಚ್.ವಿಶ್ವನಾಥ್ ಹೆಗ್ಡೆ, ಗೌರವಾಧ್ಯಕ್ಷ ಕೆ.ಸದಾನಂದ ಹೆಗ್ಡೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀಧರ ಶೆಣವ, ಆರ್.ಎಲ್.ಭಟ್, ಕೆ.ಬಿ.ಚಂದ್ರ ಮೋಹನ್, ರತ್ನಾಕರ ಶೆಟ್ಟಿ, ಕೆ.ಜಿ.ರಾಘವರಾಮ್, ಅಲೆವೂರು ಶ್ರೀಧರ ಶೆಟ್ಟಿ, ವಲೇರಿಯನ್ ಡೇಸಾ, ಜಾನ್ ವಿನ್ಸೆಂಟ್ ಲೂಯಿಸ್, ಜೋಸ್ಟಿನ್ ಸಿ., ಕೆ. ಪ್ರಭಾಕರ ಶೆಟ್ಟಿಗಾರ್, ಶಭೇ ಅಹ್ಮದ್ ಕಾಝಿ, ಟಿ.ಭಾಸ್ಕರ ರೈ, ಪಿ.ಸುಧಾಕರ ಶೆಟ್ಟಿ, ಕೆ.ವಿ.ಐತಾಳ್, ಯು.ಬಾಲಕೃಷ್ಣ ನಾಯಕ್, ಕೆ.ಶಂಕರ ಭಂಡಾರಿ, ಪಿ.ವಿ.ಐತಾಳ್, ಎಚ್.ಕೃಷ್ಣಾನಂದ ಮಲ್ಯ, ಯು.ವಾಸುದೇವ ಭಟ್ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ನಾಗರಾಜ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಾಜಿ ಗೌರವಾಧ್ಯಕ್ಷ ಸಿ.ಎಸ್. ರಾವ್ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಆಡಳಿತ ಸಮಿತಿ ಸದಸ್ಯರಾದ ನಂದ ಕುಮಾರ್, ಸುಕುಮಾರ್ ಹೆಗ್ಡೆ, ರಾಜಶ್ರೀ, ಸುರೇಶ್ ರಾವ್, ಕೋಶಾಧಿಕಾರಿ ಉಮೇಶ್ ರಾವ್ ಸನ್ಮಾನಿತರ ಪರಿಚಯ ಮಾಡಿದರು.
ಸಮಿತಿ ಸದಸ್ಯರಾದ ಟಿ.ಪ್ರಭಾಕರ್, ಪಿ.ರಘುರಾಮ್, ಹರಿದಾಸ್ ನಾಯಕ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಕೆ.ಮುರಳೀಧರ್ ಮತ್ತು ಜತೆ ಕಾರ್ಯದರ್ಶಿ ಜಯತಂತ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ನೃತ್ಯ ರೂಪಕ ನಡೆಯಿತು.