ನಾಗಸಾಧು ವೇಷದಲ್ಲಿ ಬಂದು ಉಂಗುರ ಕಳವು
Update: 2024-12-28 16:06 GMT
ಬೈಂದೂರು, ಡಿ.28: ನಾಗಸಾಧು ವೇಷದಲ್ಲಿ ಬಂದ ವ್ಯಕ್ತಿಯೊಬ್ಬ ಪೂಜೆ ಮಾಡುವ ನೆಪದಲ್ಲಿ ಅಂಗಡಿ ಮಾಲಕರೊಬ್ಬರ ಉಂಗುರವನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.
ಬೈಂದೂರಿನ ಮಂಜುನಾಥ(46) ಎಂಬವರ ಅಂಗಡಿಗೆ ಡಿ.14ರಂದು ಕಪ್ಪುಬಣ್ಣದ ಬಟ್ಟೆ ಧರಿಸಿರುವ ನಾಗ ಸಾಧು ಬಂದಿದ್ದು, ಆತ ಮಂಜುನಾಥ್ ಅವರಿಗೆ ಪ್ರಸಾದ ನೀಡಿ ಒಂದು ಪವನ್ ನವರತ್ನ ಹರಳಿನ ಚಿನ್ನದ ಉಂಗುರವನ್ನು ಪ್ರಸಾದದಲ್ಲಿ ಹಾಕಿ ಅಂಗಡಿ ಡ್ರವರ್‌ನಲ್ಲಿ ಇಡುವಂತೆ ಹೇಳಿದರು.
ಬಳಿಕ ಪೂಜೆ ಮಾಡಿ ಮತ್ತೆ ಉಂಗುರ ಹಾಕಿಕೊಳ್ಳುವಂತೆ ತಿಳಿಸಿ ಹೋಗಿದ್ದನು. ನಾಗಸಾಧು ಹೋದ ನಂತರ ಮಂಜುನಾಥ್ ಪ್ರಸಾದ ತೆಗೆದು ನೋಡಿದಾಗ ಉಂಗುರ ಕಳವಾಗಿರುವುದು ಕಂಡುಬಂತು. ನಾಗ ಸಾಧು ಮಂಜುನಾಥ್ ಅವರನ್ನು ವಶೀಕರಣ ಮಾಡುವ ರೀತಿಯಲ್ಲಿ ನಂಬಿಸಿ ಉಂಗುರವನ್ನು ಕಳವು ಗೈದು ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.