‘ಮೌಢ್ಯಮುಕ್ತ, ವಿವೇಕಯುತ ಸಮಾಜ ವಿವೇಕಾನಂದ ಕನಸಾಗಿತ್ತು’

Update: 2025-01-14 14:32 GMT
‘ಮೌಢ್ಯಮುಕ್ತ, ವಿವೇಕಯುತ ಸಮಾಜ ವಿವೇಕಾನಂದ ಕನಸಾಗಿತ್ತು’
  • whatsapp icon

ಉಡುಪಿ: ವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಗೌರವ ಹಾಗೂ ವ್ಯಕ್ತಿತ್ವ ಬೆಳವಣಿಗೆಗೆ ಮುಕ್ತವಾದ ಅವಕಾಶಗಳಿರುವ, ಮೌಢ್ಯಗಳಿಂದ ಮುಕ್ತವಾದ ವಿವೇಕಯುತ ಸಮಾಜ ನಿರ್ಮಾಣ ಸ್ವಾಮಿ ವಿವೇಕಾನಂದರ ಕನಸಾಗಿತ್ತು ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರಶಾಂತ ಎನ್. ಹೇಳಿದ್ದಾರೆ.

ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆಯ ಪ್ರಯುಕ್ತ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕಾಲೇಜಿನ ಐಕ್ಯೂಎಸಿ, ಎನ್ನೆಸ್ಸೆಸ್, ಯೂತ್ ರೆಡ್‌ಕ್ರಾಸ್ ಘಟಕ ಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ‘ವಿವೇಕಾನಂದರ ಕನಸಿನ ಭಾರತ’ ವಿಷಯದ ಕುರಿತು ಮಾತನಾಡಿದರು.

19ನೇ ಶತಮಾನದ ಸಮಾಜ ಸುಧಾರಕರಾಗಿ ದೇಶದಲ್ಲಿ ಬಲು ವಿಶಿಷ್ಟವಾದ ಸ್ಥಾನ ಹೊಂದಿರುವ ಸ್ವಾಮಿ ವಿವೇಕಾನಂದರು ಸುಧಾರಿತ ಭಾರತೀಯ ಸಮಾಜ ಮತ್ತು ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿರಬೇಕು ಎಂದು ಬಯಸಿದ್ದರು ಎಂದರು.

ಮೌಢ್ಯಗಳಿಂದ ಮುಕ್ತ ವಿವೇಕಯುತ ಸಮಾಜ ನಿರ್ಮಾಣಗೊಂಡಲ್ಲಿ ಮಾತ್ರ ವೈವಿಧ್ಯತೆಯ ಭಾರತ ಪ್ರಕಾಶಿಸಬಲ್ಲುದು. ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಿ ವೈಚಾರಿಕತೆಯನ್ನು ವೈಗೂಡಿಸಿಕೊಂಡಾಗ ಮಾತ್ರ ವೈವಿಧ್ಯ ಮಯ ಭಾರತ ಪ್ರಕಾಶಿಸ ಬಲ್ಲುದು ಎಂದು ನಂಬಿದ್ದರು. ಶಾಂತಿ ಮತ್ತು ಅಹಿಂಸೆಯಿಂದ ದೇಶದ ಉನ್ನತಿ ಹಾಗೂ ರಾಷ್ಟ್ರೀಯ ಐಕ್ಯತೆ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ. ಗಾವಂಕರ ಮಾತನಾಡಿ, ಇಂದಿನ ಯುವಕರು ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸದೃಢ ಭಾರತದ ನಿರ್ಮಾಣಕ್ಕೆ ಯುವ ಪೀಳಿಗೆಯ ಕೊಡುಗೆ ಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸ್ನಾತಕೋತ್ತರ ವಿಭಾಗದ ಕ್ಷೇಮ ಪಾಲನಾಧಿಕಾರಿ ಡಾ. ರಘು ನಾಯ್ಕ, ರೋವರ್ಸ್‌ ಮತ್ತು ರೇಂಜರ್ಸ್‌ ಘಟಕ ಸಂಯೋಜನಾಧಿಕಾರಿ ಡಾ.ಉದಯ ಶೆಟ್ಟಿ ಕೆ., ಗ್ರಂಥಪಾಲಕರಾದ ಕೃಷ್ಣ, ಕನ್ನಡ ವಿಭಾಗ ಮುಖ್ಯಸ್ಥ ರಾದ ರತ್ನಮಾಲಾ ಉಪಸ್ಥಿತರಿದ್ದರು.

ಕಾಲೇಜಿನ ಇತಿಹಾಸ ವಿಭಾಗ ಉಪನ್ಯಾಸಕ ಡಾ. ಮಹೇಶ್ ಕುಮಾರ್ ಕೆ.ಇ. ಸ್ವಾಗತಿಸಿದರು. ವಿದ್ಯಾರ್ಥಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News