ಮಕ್ಕಳ ಸಂರಕ್ಷಣೆಗೆ ಸರಕಾರ ಆದ್ಯತೆ ನೀಡಿದಾಗ ಮಾನವ ಅಭಿವೃದ್ಧಿ ಸಾಧ್ಯ: ಡಾ.ಕೋಣಿಲ್

ಉಡುಪಿ: ಮಕ್ಕಳ ಸಂರಕ್ಷಣೆ ಹಾಗೂ ಘನತೆಯ ಬದುಕಿಗೆ ಸರಕಾರಗಳು ಆದ್ಯತೆ ನೀಡಿದಾಗ ಮಾತ್ರ ಮಾನವ ಅಭಿವೃದ್ಧಿಯಾಗಲು ಸಾಧ್ಯ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯ ಮಕ್ಕಳ ರಕ್ಷಣಾ ಯೋಜನೆಯ ಯುನಿಸೆಫ್ ಪ್ರಾದೇಶಿಕ ಸಂಯೋಜಕ ಡಾ.ಕೊಣಿಲ್ ರಾಘವೇಂದ್ರ ಭಟ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದೊಂದಿಗೆ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಗೂ ಸರಕಾರಿ ಪಾಲನಾ ಸಂಸ್ಥೆಯ ಅಧೀಕ್ಷಕರು/ಸಿಬ್ಬಂದಿ ಮತ್ತು ಅನುದಾನಿತ/ಸರಕಾರೇತರ ಪಾಲನಾ ಸಂಸ್ಥೆಗಳ ಸಿಬ್ಬಂದಿಗಳಿಗೆ ಗುರುವಾರ ಉಡುಪಿ ತಾಪಂ ಸಭಾಂಗಣದಲ್ಲಿ ಆಯೋಜಿಸಲಾದ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತಿದ್ದರು.
ಮಗು ತನ್ನ ಕುಟುಂಬದ ಜೊತೆ ಘನತೆಯಿಂದ ಬದುಕುವುದೇ ಮಿಷನ್ ವಾತ್ಸಲ್ಯದ ಪ್ರಮುಖ ಅಜೆಂಡಾ. ಮಾನವ ಅಭಿವೃದ್ದಿ ಎಂಬುದು ಕೇವಲ ಆರ್ಥಿಕ ಹಾಗೂ ಸೌಲಭ್ಯ ಒದಗಿಸುವುದಲ್ಲ. ಶಿಕ್ಷಣ, ಆರೋಗ್ಯ, ನೆಮ್ಮದಿ ಹಾಗೂ ಧಾರಣ ಸಾಮರ್ಥ್ಯವೇ ಮಾನವ ಅಭಿವೃದ್ಧಿಯಾಗಿದೆ. ಮಕ್ಕಳ ಸಂರಕ್ಷಣೆ ಮಾಡುವುದ ರಿಂದ ಮಾತ್ರ ಮಾನವ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರಕಾರಗಳಿಗೆ ಕಟ್ಟಡಗಳನ್ನು ಕಟ್ಟುವುದರ ಮೇಲೆ ಇರುವ ಪ್ರೀತಿ ಮಕ್ಕಳ ಮೇಲೆ ಇಲ್ಲ ಎಂದರು.
ಭಾರತದಲ್ಲಿ 18ವರ್ಷದೊಳಗಿನ ಮಕ್ಕಳು ಯಾವುದೇ ತಪ್ಪು ಮಾಡಿದರೂ ಶಿಕ್ಷೆಗೆ ಒಳಪಡಿಸುವಂತಿಲ್ಲ. ಅವರಿಗೆ ನ್ಯಾಯ ಕೊಡಿಸಬೇಕು. ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಕೂಡಲೇ ರಕ್ಷಣೆ ಮಾಡಿ, ಪುನರ್ ವಸತಿ ಕಲ್ಪಿಸಿ, ಸುಧಾರಣೆ ಮಾಡಿ, ಅವರ ಕುಟುಂಬಕ್ಕೆ ಒಪ್ಪಿಸುವ ಮೂಲಕ ಪುನರ್‌ಸ್ಥಾಪನೆ ಮಾಡ ಬೇಕು. ಪುನರ್‌ವಸತಿ ಸಂದರ್ಭ ಮಗುವಿನೊಂದಿಗೆ ಶೇ.50 ಮತ್ತು ಕುಟುಂಬದವರೊಂದಿಗೆ ಶೇ.50ರಷ್ಟು ನಾವು ಇರಬೇಕು. ಇದರಿಂದ ಮಗುವಿನ ಸುಧಾರಣೆ ಮಾಡಬಹುದು ಎಂದು ಅವರು ತಿಳಿಸಿದರು.
ಕಾರ್ಯಗಾರವನ್ನು ಉದ್ಘಾಟಿಸಿದ ಉಡುಪಿ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಧೀಶ ಸಂತೋಷ್ ಶ್ರೀವಾಸ್ತವ್ ಮಾತನಾಡಿ, ಮಕ್ಕಳ ಶಿಸ್ತಿನ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೇ ಅವರ ರಕ್ಷಣೆ ಮಾಡಬೇಕಾಗಿದೆ. ಮಕ್ಕಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ. ಆ ನಿಟ್ಟಿನಲ್ಲಿ ಕಾರ್ಯ ಕ್ರಮ ರೂಪಿಸಬೇಕು. ಮಕ್ಕಳು ಆಟಿಕೆಯಿಂದ ದೂರವಾಗಿ ಕಂಪ್ಯೂಟರ್ ಮೊಬೈಲ್‌ನತ್ತ ಹೋಗುತ್ತಿದ್ದಾರೆ. ಅವರ ಸುರಕ್ಷತೆ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯ್ಕ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಡುಪಿ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಗೋಪಾಲಕೃಷ್ಣ ಮಾತನಾಡಿದರು. ಸುರಕ್ಷಾ ಪೂಜಾರಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.