ಮನ್‌ರೇಗಾದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಉಡುಪಿಯಲ್ಲಿ ರಾಜ್ಯದ ಸರಾಸರಿಗಿಂತ ಉತ್ತಮ: ಸಿಇಓ ಬಾಯಲ್
ಬ್ರಹ್ಮಾವರ, ಮಾ.16: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಉಡುಪಿ ಜಿಲ್ಲೆಯಲ್ಲಿ ರಾಜ್ಯದ ಸರಾಸರಿಗಿಂತ ಉತ್ತಮವಾಗಿದೆ. ಇದರಲ್ಲಿ ಹೊಸತನದ ಅನುಷ್ಠಾನಕ್ಕೆ ಗರಿಷ್ಠ ಅವಕಾಶಗಳಿವೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ.
ಕಾಡೂರು ಗ್ರಾಮ ಪಂಚಾಯತ್‌ನಲ್ಲಿ ಶನಿವಾರ ಜರಗಿದ ನರೇಗಾ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ವೈಯಕ್ತಿಕ ಕಾಮಗಾರಿ ಗಳಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗುತ್ತಿದೆ. ಸಮುದಾಯ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸಾಮಾಜಿಕ ಜವಾಬ್ದಾರಿ ಹಾಗೂ ಗುಣಾತ್ಮಕ ಆಸ್ತಿ ಸೃಜನೆಗೆ ಹೆಚ್ಚಿನ ಒತ್ತು ನೀಡುವುದು ಅಗತ್ಯವಾಗಿದೆ ಎಂದರು.
ಉಡುಪಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್ ಮಾತನಾಡಿ, ಮನ್ ರೇಗಾ ಮತ್ತು ಸಂಜೀವಿನಿ ಯೋಜನೆಯಲ್ಲಿ ಅನಿಯಮಿತವಾದ ನಾವೀನ್ಯತೆಯ ಅವಕಾಶಗಳಿದ್ದು, ಹಲವು ಕುಟುಂಬಗಳ ಯಶೋಗಾಥೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಮಹಿಳಾ ಸ್ವಾವಲಂಬನೆ ಹಾಗೂ ಆರ್ಥಿಕ ಸುಸ್ಥಿರತೆಗೆ ಈ ಯೋಜನೆಗಳು ಸಹಕಾರಿಯಾಗಿದ್ದು, ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಿ ಕಾರ್ಯ ನಿರ್ವಹಿಸಬೇಕು. ಅಂತ ರ್ಜಲ ಅಭಿವೃದ್ಧಿ, ಪರಿಸರ ಸಂರಕ್ಷಣೆಗೆ ಮನ್‌ರೇಗಾ ಯೋಜನೆ ವರದಾನವಾಗಿದ್ದು, ಪ್ರತಿಯೊಂದು ಪಂಚಾಯತ್ ಈ ಬಗ್ಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಕಾಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಲಂಧರ್ ಶೆಟ್ಟಿ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯದಿಂದ ಯೋಜನೆ ರೂಪಿಸಿ, ಪ್ರತಿ ಹಂತದಲ್ಲಿ ಜವಾಬ್ದಾರಿಯೊಂದಿಗೆ ಕಾರ್ಯ ನಿರ್ವಹಿಸುವುದ ರಿಂದ ಯಾವುದೇ ಯೋಜನೆಯ ಯಶಸ್ವೀ ಅನುಷ್ಠಾನ ಸಾಧ್ಯವಿದೆ. ಮನ್ ರೇಗಾ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಕಾರ್ಯನಿರ್ವಹಿಸ ಬೇಕಾಗಿದೆ ಎಂದರು.
ಡಿಎಫ್‌ಓ ರವೀಂದ್ರ, ಬ್ರಹ್ಮಾವರ ತಾಪಂ ಕಾರ್ಯ ನಿರ್ವಹಣಾಧಿಕಾರಿ ಇಬ್ರಾಹಿಂಪುರ, ಕಾಡೂರು ಗ್ರಾಪಂ ಉಪಾಧ್ಯಕ್ಷೆ ಪ್ರಭಾವತಿ, ಸದಸ್ಯರಾದ ವೀಣಾ, ಪಾಂಡುರಂಗ ಶೆಟ್ಟಿ, ಅಮಿತಾ ರಾಜೇಶ್, ಗುಲಾಬಿ, ವಿಜಯ ಮರಕಾಲ, ಸತೀಶ್ ಕುಲಾಲ್, ಗಿರಿಜಾ, ನರೇಗಾ ವಿಭಾಗದ ಶ್ಯಾಮ್ ಹಾಗೂ ಪ್ರಶಾಂತ, ಬ್ರಹ್ಮಾವರ ತಾಪಂ ವ್ಯಾಪ್ತಿಯ ಗ್ರಾಪಂಗಳ ಅಧ್ಯಕ್ಷರು ಮತ್ತು ಪಿಡಿಓ ಮತ್ತು ಸಿಬ್ಬಂದಿಗಳು, ಮನ್ ರೇಗಾ ಯೋಜನೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಯಶೋಗಾಥೆಗಳ ಪ್ರದರ್ಶನದೊಂದಿಗೆ ಯೋಜನೆಯ ಫಲಾನುಭವಿಗಳು ಹಾಗೂ ಸಾಧಕ ಪಂಚಾಯತ್ ಗಳನ್ನು ಸನ್ಮಾನಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಕಾರ್ಯಕ್ರಮ ನಿರೂಪಿಸಿದರು.