ಬಿಲ್ಲವರು, ಮೊಗವೀರರು ಭಾವನಾತ್ಮಕವಾಗಿ ಒಂದಾಗಬೇಕು: ಜಿ.ಶಂಕರ್
ಉಡುಪಿ, ಮಾ.16: ಕರಾವಳಿಯಲ್ಲಿ ಬಿಲ್ಲವರು ಹಾಗೂ ಮೊಗವೀರರು ದೊಡ್ಡ ಶಕ್ತಿಯಾಗಿದ್ದಾರೆ. ಹಿಂದುಳಿದ ಜಾತಿಗಳಾಗಿರುವ ನಾವು ಸ್ವಾಭಿಮಾನಿ ಗಳಾಗಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯ ತೊರೆದು ರಾಜಕೀಯ ರಹಿತವಾಗಿ ಹಾಗೂ ಭಾವನಾತ್ಮಕವಾಗಿ ಒಂದಾಗಬೇಕು ಎಂದು ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಹೇಳಿದ್ದಾರೆ.
ಆತ್ಮಾನಂದ ಸರಸ್ವತಿ ಕಿರಿಯ ತಾಂತ್ರಿಕ ಮಹಾವಿದ್ಯಾಲಯ ಬಿಲ್ಲಾಡಿ, ಧರ್ಮಸ್ಥಳ ಶ್ರೀರಾಮಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್ ಹಾಗೂ ಯುವವಾಹಿನಿ ಉಡುಪಿ ಘಟಕದ ಸಹಯೋಗದೊಂದಿಗೆ ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್‌ನ ಜಗದ್ಗುರು ಪೀಠದ ಪೀಠಾಧೀಶ 1008 ಮಹಾ ಮಂಡಲೇಶ್ವರ ಸದ್ಗುರು ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಗೌರವ ಅಭಿನಂದನಾ ಕಾರ್ಯಕ್ರಮ ಮಹಾಭಿವಂದ್ಯ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬಿಲ್ಲವರು, ಮೊಗವೀರರು ಸೇರಿದಂತೆ ಎಲ್ಲ ಹಿಂದುಳಿದ ಜಾತಿಯವರು ರಾಮಕ್ಷೇತ್ರದ ಸ್ವಾಮೀಜಿಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕು. ಬಿಲ್ಲವ ಸಮುದಾಯ ಸಣ್ಣಪುಟ್ಟ ಭಿನ್ನಾಭಿಪ್ರಾಯ ತೊರೆದು ತಮ್ಮ ಸಮುದಾಯದ ಸ್ವಾಮೀಜಿಯನ್ನು ಒಗ್ಗಟ್ಟಾಗಿ ಸ್ವೀಕರಿಸಬೇಕು ಎಂದರು.
ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯನ್ನು ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಮಾಂಕಾಳ ವೈದ್ಯ ಅಭಿನಂದಿಸಿದರು. ಮಾಜಿ ಶಾಸಕ ಕೆ.ರಘುಪತಿ ಭಟ್ ಅಭಿನಂದನಾ ನುಡಿಗಳನ್ನಾಡಿದರು. ಅಧ್ಯಕ್ಷತೆ ಯನ್ನು ಆತ್ಮಾನಂದ ಸರಸ್ವತಿ ಕಿರಿಯ ತಾಂತ್ರಿಕ ಮಹಾವಿದ್ಯಾಲಯ ಬಿಲ್ಲಾಡಿ ಅಧ್ಯಕ್ಷ ಓಬು ಪೂಜಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಕೋಶಾ ಧಿಕಾರಿ ಪದ್ಮರಾಜ್ ಆರ್., ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಉಪಸ್ಥಿತರಿದ್ದರು.
ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ದಯಾನಂದ ಕರ್ಕೇರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮಸ್ಥಳ ಶ್ರೀರಾಮಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿ ಭಾಸ್ಕರ ಸುವರ್ಣ ವಂದಿಸಿದರು. ತೇಜಸ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.