ಬೈಂದೂರಿನಲ್ಲಿ ತೆಂಗು ಬೆಳೆಗೆ ಕಪ್ಪುಹುಳದ ಬಾಧೆ: ಕ್ರಮಕ್ಕೆ ಆಗ್ರಹ
ಸಾಂದರ್ಭಿಕ ಚಿತ್ರ
ಬೈಂದೂರು, ಮಾ.17: ರಾಜ್ಯದಲ್ಲಿ ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತೆಂಗು ಬೆಳೆಗೆ ಕಪ್ಪು ಹುಳ ಬಾಧೆ ರೋಗ ತಗುಲಿದ್ದು, ತೆಂಗು ಬೆಳೆಗಾರರಿಗೆ ಪರಿಹಾರ ನೀಡಿಕೆ, ರೋಗ ನಿವಾರಣಾ ಕ್ರಮಗಳು ಹಾಗೂ ತೆಂಗು ಬೆಳೆಗಾರರ ಕುಂದುಕೊರತೆ ಹಾಗೂ ಅವರ ಶ್ರೇಯೋಭಿವೃದ್ಧಿಗೆ ಸಂಬಂಧಿಸಿ ದಂತೆ ಸರಕಾರ ಕೈಗೊಂಡ ಕ್ರಮಗಳ ಕುರಿತು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಇಂದು ಸರಕಾರವನ್ನು ಪಶ್ನಿಸಿದರು.
ಶಾಸಕರ ಪ್ರಶ್ನೆಗೆ ಉತ್ತರಿಸಿದ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ರಾಜ್ಯದಲ್ಲಿ 4.6 ಹೆಕ್ಟೆರ್ ಪ್ರದೇಶದಲ್ಲಿ ತೆಂಗು ಬೆಳೆಗೆ ಕಪ್ಪು ಹುಳದ ಬಾಧೆ ಕಂಡು ಬಂದಿದ್ದು, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮೂವತ್ತು ಮುಡಿ ಮತ್ತು ಕನ್ನಡ ಕುದ್ರು ಗ್ರಾಮಗಳಲ್ಲಿ 2 ಹೆಕ್ಟೆರ್ ಪ್ರದೇಶದಲ್ಲಿ ತೆಂಗು ಬೆಳೆಗೆ ಕಪ್ಪುಹುಳುವಿನ ಬಾಧೆ ರೋಗ ಪ್ರಕರಣಗಳು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಸರಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಮತ್ತು ಕಲ್ಪವೃಕ್ಷ ಬೆಳೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಗಂಟಿಹೊಳೆ ಸರಕಾರವನ್ನು ಆಗ್ರಹಿಸಿದರು.