ಕೊರಗ ಸಮುದಾಯದ ಮಹಿಳಾ ಪಿಎಚ್‌ಡಿ ಸಾಧಕಿಯರಿಗೆ ಸನ್ಮಾನ
ಉಡುಪಿ, ಮಾ.17: ಕೊರಗ ಸಮುದಾಯದ ಮಹಿಳಾ ಪಿಎಚ್‌ಡಿ ಸಾಧಕಿಯರಿಗೆ ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿತು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಆಯೋಜಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಜ್ಯದ ಬುಡಕಟ್ಟು ಮಹಿಳಾ ಸಾಧಕಿಯರೊಂದಿಗೆ ಉಡುಪಿ ಜಿಲ್ಲೆಯ ಕೊರಗ ಸಮುದಾಯದ ಮಹಿಳಾ ಡಾಕ್ಟರೇಟ್ ಪದವೀಧರರನ್ನು ಸಹ ಅಭಿನಂದಿಸಲಾಯಿತು.
ಉಡುಪಿ ಜಿಲ್ಲೆಯ ಸಾಸ್ತಾನ ಸಮೀಪದ ಗುಂಡ್ಮಿಯ ಡಾ. ಸಬಿತಾ ಕೊರಗ ಇವರು ಪಿ.ವಿ.ಟಿ.ಜಿ ಬುಡಕಟ್ಟು ಮಹಿಳೆಯರಲ್ಲಿ ಡಾಕ್ಟರೇಟ್ ಪದವಿ ಪಡೆದ ಪ್ರಥಮ ಮಹಿಳೆಯಾಗಿದ್ದಾರೆ. ಪ್ರಸ್ತುತ ಇವರು ಮಂಗಳೂರು ವಿಶ್ವವಿದ್ಯಾ ನಿಲಯದಲ್ಲಿ ಸಮಾಜ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
ಡಾ.ಕಲಾವತಿ ಸೂರಾಲು ಇವರು ಬ್ರಹ್ಮಾವರ ತಾಲೂಕಿನ ಕರ್ಜೆ ಸಮೀಪದ ಸೂರಾಲಿನವರಾಗಿದ್ದು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದು, ಮೈಸೂರಿನಲ್ಲಿ ಸಂಶೋಧನಾಧಿ ಕಾರಿಯಾಗಿ ಕಾರ್ಯ ನಿರ್ವಹಿಸುತಿದ್ದಾರೆ.