ತುಳು ಆಚರಣೆಗಳು ನಮ್ಮ ಹಿರಿಯರ ಬಹುದೊಡ್ಡ ಕೊಡುಗೆ: ಡಾ.ವಿದ್ಯಾಕುಮಾರಿ

ಉಡುಪಿ: ತುಳುನಾಡಿನ ಸಂಸ್ಕೃತಿ ಇತರ ಭಾಗಕ್ಕೆ ಹೋಲಿಸಿದರೆ ವಿಭಿನ್ನವಾಗಿದೆ. ಇಲ್ಲಿನ ಭಾಷೆ ಹಾಗೂ ವಿಶಿಷ್ಟ ಆಚರಣೆಗಳು ಎಲ್ಲೂ ಕಾಣ ಸಿಗುವುದಿಲ್ಲ. ಈ ಆಚರಣೆಗಳು ನಮ್ಮ ಹಿರಿಯರ ಬಹು ದೊಡ್ಡ ಕೊಡುಗೆ ಯಾಗಿದೆ. ಇದನ್ನು ಯುವಜನತೆಗೆ ತಿಳಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರ್ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಸಂಗಮ ಕಲಾವಿದೆರ್ ಮಣಿಪಾಲ ಇವರ ವತಿಯಿಂದ ಅವಿಭಜಿತ ದ.ಕ. ಜಿಲ್ಲೆಯ ಪದವಿ ವಿದ್ಯಾರ್ಥಿಗಳಿಗೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ತುಳು ಸಾಹಿತ್ಯ- ಸಾಂಸ್ಕೃತಿಕ ಹಬ್ಬ ‘ಕುರಲ್’ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಲ್ಲಿಯ ಎಲ್ಲ ಆಚರಣೆಗಳು ಜನಜೀವನದ ಭಾಗವಾಗಿದೆ. ಇದರ ಬಗ್ಗೆ ತಿಳಿದುಕೊಂಡಾಗ ನಮಗೆ ಈ ಮಣ್ಣಿನ ಗುಣ ಅರಿವು ಆಗುತ್ತದೆ. ನಮ್ಮ ಕಲೆ, ಸಂಸ್ಕೃತಿಯಿಂದ ಯುವಜನತೆ ವಿಮುಖರಾಗುತ್ತಿದ್ದಾರೆ. ಜನಪದ ಕಲೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಇವುಗಳನ್ನು ಸ್ಪರ್ಧೆಗಳ ಮೂಲಕ ಯುವಜನತೆ ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಸಂಸ್ಕೃತಿ ಉಳಿಸುವುದು ಅಂದರೆ ಫೋಟೋ ತೆಗೆದು ಸಾಮಾಜಿಕ ಜಾಲತಾಣ ಗಳಲ್ಲಿ ಅಪ್‌ಲೋಡ್ ಮಾಡುವುದು ಎಂಬ ಭ್ರಮೆಯಲ್ಲಿ ನಾವು ಇದ್ದೇವೆ. ಭಾಷೆ ಎಂಬುದು ನಮ್ಮ ಬದುಕು. ತುಳುವರ ಬದುಕು ಸಾಕಷ್ಟು ವಿಶಾಲವಾಗಿದೆ. ಅದರ ಬಗ್ಗೆ ಇನ್ನು ಹೆಚ್ಚಿನ ಅಧ್ಯಯನ ಅಗತ್ಯ ಇದೆ ಎಂದು ತಿಳಿಸಿದರು.
ಕನ್ನಡ ಮತ್ತು ಮಳಯಾಳಂನಂತೆ ತುಳು ಸಾಹಿತ್ಯದಲ್ಲೂ ಎಲ್ಲ ರೀತಿಯ ಪ್ರಕಾರಗಳು ಇವೆ. ತುಳು ಆಚರಣೆಗಳ ಹಿನ್ನೆಲೆಯ ಬಗ್ಗೆ ವಿಮರ್ಶಾತ್ಮಕ ದೃಷ್ಠಿಕೋನವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ತುಳು ಸೇರಿದಂತೆ ಸಣ್ಣ ಸಣ್ಣ ಭಾಷೆಗಳು ಆಂಗ್ಲ ಭಾಷೆಯ ಪ್ರಭಾವಕ್ಕೆ ಒಳಗಾಗಿ ಸವಾಲುಗಳನ್ನು ಎದುರಿಸುತ್ತಿದೆ. ಆದುದರಿಂದ ತುಳು ಭಾಷೆಯನ್ನು ನಮ್ಮ ಮಕ್ಕಳಿಗೆ ಕಲಿಸುವ ಕಾರ್ಯ ಮಾಡಬೇಕು ಎಂದರು.
ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ತುಳು ಭಾಷೆ ಮತ್ತು ಸಂಸ್ಕೃತಿಗೆ ಅವಿನಾಭ ಸಂಬಂಧ ಇದೆ. ಭಾಷೆ ಇಲ್ಲದಿದ್ದರೆ ಸಂಸ್ಕೃತಿ ಉಳಿಯಲು ಸಾಧ್ಯವಿಲ್ಲ. ಆದುದರಿಂದ ನಮ್ಮ ಭಾಷೆ ಉಳಿಸುವ ಮತ್ತು ಮುಂದಿನ ಪೀಳಿಗೆಗೆ ಕಲಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯ ಬಾಬು ಕೊರಗ ಪಾಂಗಾಳ, ಸಂಗಮ ಕಲಾವಿದೆರ್ ಅಧ್ಯಕ್ಷ ರಾಘವೇಂದ್ರ ನಾಯ್ಕ್, ಕಾರ್ಯಕ್ರಮದ ಸಂಚಾಲಕ ಶ್ರೇಯಸ್ ಕೋಟ್ಯಾನ್ ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ಸ್ವಾಗತಿಸಿದರು. ಸಂಗಮ ಕಲಾವಿದೆರ್ ಕಾರ್ಯದರ್ಶಿ ಪವನ್ ಪೂಜಾರಿ ವಂದಿಸಿದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ಎರಡು ಜಿಲ್ಲೆಗಳ ಒಟ್ಟು 11 ಕಾಲೇಜು ತಂಡಗಳು ಭಾಗವಹಿಸಿದ್ದವು. ಡೋಲು ಪ್ರಾತ್ಯಕ್ಷಿಕೆ, ಸ್ವರಚಿತ ಕವಿತೆ ವಾಚನ, ಭಾಷಣ ಸ್ಪರ್ಧೆ, ತುಳು ನಲಿಕೆ, ಫೋಟೋಗ್ರಫಿ ಮೊದಲಾದ ಸ್ಪರ್ಧೆಗಳು ನಡೆದವು.