ಮಲ್ಪೆಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆಗೈದ ಪ್ರಕರಣ: ವ್ಯಾಪಕ ಖಂಡನೆ

ಉಡುಪಿ, ಮಾ.19: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಗೈದ ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಕೇಳಿಬಂದಿವೆ.
ಕಾನೂನು ಯಾರಿಗೂ ಯಾವತ್ತೂ ಕೂಡ ಹಲ್ಲೆ ಮಾಡಲು ಅನುಮತಿ ನೀಡುವುದಿಲ್ಲ. ಹಲ್ಲೇ ನಡೆಸಿರು ವುದು ಖಂಡನಾರ್ಹ. ಸುಶಿಕ್ಷಿತರ ಜಿಲ್ಲೆ ಉಡುಪಿಯಲ್ಲಿ ಈ ಹಲ್ಲೆ ಪ್ರಕರಣ ನಡೆದಿದ್ದು, ಮಾನವೀಯತೆ ಮರೆತು ಮೃಗಗಳಂತೆ ಹಲ್ಲೆ ಮಾಡಿದ್ದಾರೆ. ಶಿಕ್ಷಿತರಾದ ನಮ್ಮ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದ ಅಗತ್ಯತೆ ಇದೆ. ಈ ಕುರಿತು ಇಲಾಖೆ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ನ್ಯಾಯವಾದಿ ಅರುಣ್ ಕುಂದರ್ ಕಲ್ಗದ್ದೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ವಕೀಲರ ಸಂಘ: ದಲಿತ ಮಹಿಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಅಮಾನುಷ ಘಟನೆಯು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಘಟನೆ ನಡೆದ ತಕ್ಷಣ ಪ್ರಕರಣ ದಾಖಲಿಸಬೇಕಾಗಿದ್ದ ಪೋಲಿಸರು ತಡವಾಗಿ ಪ್ರಕರಣ ದಾಖಲಿಸಿರುವ ಹಿಂದೆ ಕಾಣದ ಕೈಗಳ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇನ್ನಾದರೂ ಪೋಲಿಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಲ್ಲೆಗೊಳಗಾದ ಮಹಿಳೆಗೆ ಸೂಕ್ತ ನ್ಯಾಯ ದೊರಕಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ವಿವಿಧ ಸಂಘಟನೆಗಳು: ಈ ಘಟನೆಯು ಅತ್ಯಂತ ಅಮಾನವೀಯ ವಾಗಿದ್ದು ಕಾನೂನನ್ನು ಕೈಗೆತ್ತಿಕೊ ಳ್ಳುವ ಹಕ್ಕು ಯಾರಿಗೂ ಇಲ್ಲ. ಹಾಗಾಗಿ ಸರಕಾರ ಕೂಡಲೇ ಇಂತಹ ಕೃತ್ಯದ ವಿರುದ್ಧ ಕ್ರಮ ಕೈಗೊಳ್ಳ ಬೇಕಾಗಿದೆ. ತಪ್ಪಿಸ್ಥರನ್ನು ಬಂಧಿಸಿ ಮಹಿಳೆಗೆ ನ್ಯಾಯ ಒದಗಿಸಿಕೊಡಬೇಕೆಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ ಆಗ್ರಹಿಸಿದ್ದಾರೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ವಿಮೆನ್ ಇಂಡಿಯಾ ಮೂಮ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆ ನಾಝಿಯ ನಸ್ರುಲ್ಲ, ಉಡುಪಿಯಂತಹ ಸುಶಿಕ್ಷಿತರ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ಕಳವಳಕಾರಿ. ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಗಳನ್ನು ಬಂಧಿಸಬೇಕು. ಆ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಒತ್ತಾಯಿಸಿದ್ದಾರೆ.
ಮಲ್ಪೆಯಲ್ಲಿ ಮಹಿಳೆಗೆ ಹಲ್ಲೆ ನಡೆಸಿದ ಎಲ್ಲ ತಪ್ಪಿಸ್ಥರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಜರಗಿಸಿ, ಮಹಿಳೆಗೆ ನ್ಯಾಯ ಒದಗಿಸಿಕೊಡಬೇಕೆಂದು ಕೆಪಿಸಿಸಿ ಸಂಯೋಜಕ ಹಬೀಬ್ ಅಲಿ ಹಾಗೂ ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲೀಯೋ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.