ಯಕ್ಷಗಾನ ವಿದ್ವಾಂಸ, ಮದ್ದಲೆಗಾರ ಬಿ.ಗೋಪಾಲಕೃಷ್ಣ ಕುರುಪ್ ನಿಧನ

ಉಡುಪಿ, ಮಾ.19: ಯಕ್ಷಗಾನ ಕ್ಷೇತ್ರದ ಹಿರಿಯ ವಿದ್ವಾಂಸ, ಮದ್ದಲೆಗಾರ ಬರ್ಕುಳ ಗೋಪಾಲಕೃಷ್ಣ ಕುರುಪ್ (90) ಮಂಗಳವಾರ ನಿಧನರಾಗಿದ್ದಾರೆ. ಗೋಪಾಲಕೃಷ್ಣ ಕುರುಪ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೇರಳ ಮೂಲದವರಾದ ಕುರುಪ್ ಅವರ ಹಿರಿಯರು ದಕ್ಷಿಣಕನ್ನಡ ಜಿಲ್ಲೆಯ ಶಿಶಿಲದಲ್ಲಿ ನೆಲೆಸಿದ್ದರು. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಳದಲ್ಲಿ ಬಹುಕಾಲ ವಾಸವಿದ್ದ ಅವರು ಇತ್ತೀಚೆಗಿನ ದಿನ ಗಳಲ್ಲಿ ಕೇರಳದ ನೀಲೇಶ್ವರದ ಮಕ್ಕಳ ಮನೆಯಲ್ಲಿ ನೆಲೆಸಿದ್ದರು. ಚೆಂಡೆ-ಮದ್ದಲೆ ನುಡಿಸುವಲ್ಲಿ ಶಾಸ್ತ್ರಜ್ಞಾನ ವನ್ನು ಪಡೆದಿದ್ದ ಕುರುಪ್ ಅದನ್ನು ಅಧಿಕೃತ ಪಠ್ಯರೂಪದಲ್ಲಿ ಪ್ರಕಟಿಸಿದ ಮೊದಲಿ ಗರಾಗಿದ್ದರು. ಅವರಿಗೆ ಭಾಗವತಿಕೆಯ ಬಗ್ಗೆಯೂ ಆಳವಾದ ಜ್ಞಾನವಿತ್ತು.
1952ರಲ್ಲಿ ಕೂಡ್ಲು ಮೇಳದಲ್ಲಿ ಪೂರ್ವರಂಗಕ್ಕೆ ಹಾಡುವ ಅವಕಾಶ ದೊರೆತು ಮದ್ಲೆಗಾರ ಕುದ್ರೆಕೂಡ್ಲು ರಾಮಭಟ್ಟರ ಮೆಚ್ಚುಗೆಗಳಿಸಿ, ಮುಂದೆ, ವೃತ್ತಿಪರರಾಗಿ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ್ದರು. ಹಿರಿಯ ಬಲಿಪ ನಾರಾಯಣ ಭಾಗವತ, ಅಗರಿ ಶ್ರೀನಿವಾಸ ಭಾಗವತ, ಹಿರಿಯ ಕುದ್ರೆಕೂಡ್ಲು ರಾಮ ಭಟ್ಟ, ನಾಂಬಾಡಿ ಸುಬ್ಬಯ ಶೆಟ್ಟಿ, ನೆಡ್ಲೆ ನರಸಿಂಹ ಭಟ್ಟ ಮೊದಲಾದವರ ಗುರುತನದಲ್ಲಿ ಜ್ಞಾನವನ್ನು ಸಿದ್ಧಿಸಿ ಕೊಂಡು, ಅದೇ ಶೃದ್ಧೆಯಲ್ಲಿ ಗುರುಗಳಾಗಿ ಅನೇಕ ಮಂದಿ ಶಿಷ್ಯರನ್ನು ಸಿದ್ಧಗೊಳಿಸಿದ್ದರು.
ಮೃದಂಗ ವಿದ್ವಾನ್ ಟಿ. ಆರ್. ಕೃಷ್ಣನ್ ಅವರಿಂದ ಮೃದಂಗ ನುಡಿತದ ಸೂಕ್ಷ್ಮಗಳನ್ನು ಕಲಿತಿದ್ದ ಇವರು ಅನೇಕ ಯಕ್ಷಗಾನ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. 80ರ ದಶಕದಲ್ಲಿ ಕು. ಶಿ. ಹರಿದಾಸ ಭಟ್ಟ, ಮುಳಿಯ ಮಹಾಬಲ ಭಟ್ಟರ ನೇತೃತ್ವದಲ್ಲಿ ಎಂಜಿಎಂ ಕಾಲೇಜಿನ ಆರ್‌ಆರ್‌ಸಿಯಲ್ಲಿ ಜರಗಿದ ಹಿಮ್ಮೇಳದ ದಾಖಲಾತಿ ಕಮ್ಮಟದಲ್ಲಿ ಓರ್ವ ಪ್ರಮುಖ ಆಕರ ವ್ಯಕ್ತಿಯಾಗಿದ್ದರು.
ಯಕ್ಷಗಾನದ ಹಿಮ್ಮೇಳ ವಿಭಾಗಕ್ಕೊಂದು ಲಕ್ಷಣಗ್ರಂಥವನ್ನು ರಚಿಸುವ ನಿಟ್ಟಿನ ಪ್ರಯತ್ನವಾಗಿ ‘ತೆಂಕುತಿಟ್ಟು-ಪ್ರಾಥಮಿಕ ಯಕ್ಷಗಾನ ಪಾಠಗಳು’ ಕೃತಿಯನ್ನು ಬರೆದು ಪ್ರಕಟಿಸಿದ್ದರು. ಆ ಬಳಿಕ ‘ತೆಂಕುತಿಟ್ಟು ಯಕ್ಷಗಾನದ ಮದ್ದಲೆವಾದನ ಕ್ರಮ’ ಮತ್ತು ‘ತೆಂಕುತಿಟ್ಟು ಯಕ್ಷಗಾನದ ಚೆಂಡೆವಾದನ ಕ್ರಮ’ ಎಂಬ ಪ್ರಮುಖ ಕೃತಿಗಳನ್ನು ರಚಿಸಿದ್ದರು. ಯಕ್ಷಗಾನದ ತಾಳ ಸಂಬಂಧಿ ಅಧ್ಯಯನದ ಭಾಗವಾಗಿ ‘ತ್ತಿತ್ತಿತ್ತೆ’ ಎಂಬ ಪ್ರತ್ಯೇಕ ಕೃತಿ ಬರೆದಿರು ವುದು ಅವರ ವಿದ್ವತ್ತಿನ ಪ್ರತೀಕವಾಗಿತ್ತು. ಅಲ್ಲದೆ ಕುರುಪ್ ಅವರು ‘ಚೆಂಡೆ-ಮದ್ದಲೆಗಳ ನಡುವೆ’ ಎಂಬ ಆತ್ಮಕಥನವನ್ನು ಕೂಡ ಪ್ರಕಟಿಸಿದ್ದಾರೆ.
ಧರ್ಮಸ್ಥಳ, ಕರ್ನಾಟಕ, ಬಳ್ಳಂಬೆಟ್ಟು, ಇರಾ, ಕರ್ನಾಟಕ-ಕಲಾವಿಹಾರ ಮೇಳಗಳಲ್ಲಿ ತಿರುಗಾಟ ನಡೆಸಿರುವ ಕುರುಪ್ ಅವರು ಸುತ್ತಮುತ್ತಲ ಊರುಗಳಲ್ಲಿ ಯಕ್ಷಗಾನ ಹಿಮ್ಮೇಳ ತರಗತಿಗಳನ್ನು ನಡೆಸಿ ಯಕ್ಷಗಾನ ಶಿಕ್ಷಕರಾಗಿ ಹೆಸರು ಪಡೆದವರು. ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಮೂರು ವರ್ಷ ಹಿಮ್ಮೇಳದ ಗುರುಗಳಾಗಿ ಸೇವೆ ಸಲ್ಲಿಸಿದ್ದರು. ಆಸಕ್ತರು, ಜಿಜ್ಞಾಸುಗಳು ಸಿಕ್ಕಿದರೆ ಎಲ್ಲೆಂದರಲ್ಲಿ ತಾಳ-ಲಯ-ಛಂದಸ್ಸು ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು.
ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಭಾಜನರಾಗಿದ್ದ ಕುರುಪ್ ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.