ಕಟೀಲು: ಅಕಾಡೆಮಿಯ ಯಕ್ಷಗಾನ ತಾಳಮದ್ದಲೆ ಕಮ್ಮಟ ಉದ್ಘಾಟನೆ

ಕಟೀಲು, ಮಾ.19: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಕಟೀಲಿನ ಶ್ರೀದುರ್ಗಾ ಮಕ್ಕಳ ಮೇಳ ಹಾಗೂ ಕಟೀಲು ಶ್ರೀದುರ್ಗಾ ಪರಮೇಶ್ವರಿದೇವಸ್ಥಾನದ ಸಹಯೋಗದಲ್ಲಿ ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಳದ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡ ಎರಡು ದಿನಗಳ ಯಕ್ಷಗಾನ ತಾಳಮದ್ದಲೆ ಕಮ್ಮಟವನ್ನು ಶ್ರೀ ದುರ್ಗಾ ಮಕ್ಕಳ ಯಕ್ಷಗಾನ ಮೇಳದ ಅಧ್ಯಕ್ಷರು ಹಾಗೂ ಕಟೀಲು ದೇವಳದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಮಂಗಳವಾರ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಯಕ್ಷಗಾನ ನಮ್ಮ ಮಣ್ಣಿನ ಕಲೆ. ಇದು ಅನ್ಯ ಕಲಾಪ್ರಕಾರಗಳ ಹಾಗಲ್ಲ. ಇಲ್ಲಿ ಅಭಿ ನಯ, ನೃತ್ಯ, ಮಾತು, ಹಾಡು, ವೇಷಭೂಷಣ, ಬಣ್ಣಗಾರಿಕೆ ಹೀಗೆ ಎಲ್ಲವೂ ಸಮ್ಮಿಳಿತವಾಗಿದ್ದು, ನವರಸ ಭಾವಾಭಕ್ತಿಗೆ ಅವಕಾಶವಿದೆ. ಯಕ್ಷಗಾನ ಕೇವಲ ಮನೋರಂಜನೆಗಾಗಿ ಅಲ್ಲ. ಇದು ಸುಸಂಸ್ಕೃತ ಸಮಾಜ ವನ್ನು ಕಟ್ಟಿಕೊಡಬಲ್ಲ ಶಕ್ತಿಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಯಕ್ಷಗಾನ ಅಭ್ಯಸಿಸಿ ಪ್ರದರ್ಶಿಸುವ ಕಲಾವಿದರೆಲ್ಲಾ ಶ್ರೇಷ್ಠರೇ ಆಗಿದ್ದಾರೆ. ಯಕ್ಷಗಾನವನ್ನು ಕಲಿತ ಮಕ್ಕಳು ಗುರುಹಿರಿಯರಿಗೆ ಗೌರವ ಕೊಡುವುದು ಸೇರಿದಂತೆ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುತ್ತಾರೆ. ಹೀಗಾಗಿ ಯಕ್ಷಗಾನ ಅಕಾಡೆಮಿ ಮಕ್ಕಳ ಮೇಳಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ ಎಂದು ತಿಳಿಸಿದರು.
ಇಂದು ಕಟೀಲು ದೇವಳದಿಂದ 6 ಮೇಳಗಳು, ಮಂದಾರ್ತಿ ದೇವಳದಿಂದ 5 ಮೇಳಗಳು ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ 40ಕ್ಕೂ ಅಧಿಕ ಯಕ್ಷಗಾನ ಮೇಳಗಳು ಕಾರ್ಯಾಚರಿಸುತ್ತಿವೆ. ಯಕ್ಷಗಾನ ಅಕಾಡೆಮಿ ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರಿಗೆ ನಿರಂತರ ಬೆಂಬಲ ನೀಡಲಿದೆ. ಯಕ್ಷಗಾನಕ್ಕೆ ಸಂಬಂಧ ಪಟ್ಟ ವಿವಿಧ ಕಮ್ಮಟಗಳು, ತರಬೇತಿಗಳನ್ನು ನಡೆಸಲು ಸಂಘ ಸಂಸ್ಥೆಗಳು ಮುಂದೆ ಬರಬೇಕು. ಅವುಗಳಿಗೆ ಅಕಾಡೆಮಿ ನಿರಂತರ ಪ್ರೋತ್ಸಾಹ ನೀಡಲಿದೆ ಎಂದರು.
ಎರಡು ದಿನಗಳಲ್ಲಿ ತಾಳಮದ್ದಲೆಯಲ್ಲಿ ಪುರಾಣ ಹಾಗೂ ಪ್ರಸಂಗಗಳ ಸಮನ್ವಯ, ಪ್ರಕೃತ ತಾಳಮದ್ದಲೆ ಸ್ಥಿತಿಗತಿ, ತಾಳಮದ್ದಲೆ ಔಚಿತ್ಯ ಪರಾಮರ್ಶೆ ಮುಂತಾದ ವಿಷಯಗಳ ಕುರಿತು ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿ ಸದಸ್ಯ ರಾಜೇಶ್ ಕುಳಾಯಿ, ಉದ್ಯಮಿ ದೊಡ್ಡಯ್ಯ ಮೂಲ್ಯ, ಕಟೀಲು ಕೊಂಡೆಲ್ತಾಯ ದೇವಳದ ಮೊಕ್ತೇಸರ ಲೋಕಯ್ಯ ಸಾಲ್ಯಾನ್, ಕಾಲೇಜಿನ ಪ್ರಾಂಶುಪಾಲ ಡಾ.ವಿಜಯ, ಕಸಾಪ ಮುಲ್ಕಿ ತಾಲೂಕು ಅಧ್ಯಕ್ಷ ಮಿಥುನ್ ಉಡುಪ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಕೃತ ಅಧ್ಯಾಪಕ ಶ್ರೀವತ್ಸ ಎಸ್.ಆರ್. ಕಾರ್ಯಕ್ರಮ ನಿರೂಪಿಸಿದರು.