ಉಡುಪಿ ನಗರಸಭೆಗೆ ವಿವಿಧ ಬೇಡಿಕೆ: ಸಚಿವ ರಹೀಂಖಾನ್‌ಗೆ ಶಾಸಕ ಯಶ್‌ಪಾಲ್ ಮನವಿ

ಉಡುಪಿ: ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಇಂದು ರಾಜ್ಯ ಪೌರಾಡಳಿತ ಸಚಿವ ರಹೀಂ ಖಾನ್ ಅವರನ್ನು ಭೇಟಿಯಾಗಿ ಉಡುಪಿ ನಗರಸಭೆಗೆ ಸಂಬಂಧಿತ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಪತ್ರ ಅರ್ಪಿಸಿದರು.
ಉಡುಪಿ ನಗರಸಭೆಗೆ ಪೂರ್ಣಕಾಲಿಕ ಖಾಯಂ ಪೌರಾಯುಕ್ತ ಹುದ್ದೆ ಖಾಲಿ ಇದ್ದು, ಕಳೆದ ಹಲವಾರು ತಿಂಗಳಿನಿಂದ ಪೂರ್ಣಕಾಲಿಕ ಪೌರಾಯುಕ್ತ ರಿಲ್ಲದೆ ನಗರಸಭೆಯ ಆಡಳಿತಾತ್ಮಕ ಕಾರ್ಯಗಳು ಹಾಗೂ ಸಾರ್ವಜನಿಕರ ದಿನನಿತ್ಯದ ಸೇವೆಗಳಿಗೆ ಸಮಸ್ಯೆಯಾಗುತ್ತಿರುವುದರಿಂದ ಪೂರ್ಣಕಾಲಿಕ ಪೌರಾಯು ಕ್ತರನ್ನು ಒದಗಿಸುವಂತೆ ಸಚಿವರಿಗೆ ಮನವಿ ಮಾಡಿದರು.
ಉಡುಪಿ ನಗರಸಭೆಯ ನೀರು ಸರಬರಾಜು ಅನುದಾನದಲ್ಲಿ ಲಭ್ಯವಿರುವ ನಿಧಿಯನ್ನು ಸಾಮಾನ್ಯ ನಿಧಿಯಾಗಿ ಸಿವಿಲ್ ಕಾಮಗಾರಿಗಳಿಗೆ ಬಳಸಲು ಸಲ್ಲಿಸಿದ ಪ್ರಸ್ತಾವನೆಗೆ ಶೀಘ್ರ ಅನುಮೋದನೆ, ನಗರ ಸಭೆಯ ನೂತನ ಕಛೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಹಾಗೂ ಉಡುಪಿ ನಗರದ ಮೂಲ ಸೌಕರ್ಯ ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಇಲಾಖೆಯ ಮೂಲಕ ವಿಶೇಷ ಅನುದಾನ ಒದಗಿಸಿ ಸಹಕಾರ ನೀಡುವಂತೆ ಯಶ್‌ಪಾಲ್ ಸುವರ್ಣ ಸಚಿವರನ್ನು ಕೋರಿದರು.
ಶಾಸಕರ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು ಶೀಘ್ರದಲ್ಲೇ ನೇಮಕ ಹಾಗೂ ಅನುದಾನ ಬೇಡಿಕೆಯ ಬಗ್ಗೆ ಕ್ರಮವಹಿಸುವುದಾಗಿ ತಿಳಿಸಿದರು ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.