ಅಜೆಕಾರು ಕೊಲೆ ಪ್ರಕರಣ: ಆರೋಪಿ ಪ್ರತಿಮಾಳ ಜಾಮೀನಿಗೆ ಅರ್ಜಿ ತಿರಸ್ಕಾರ

ಕಾರ್ಕಳ: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮೃತರ ಪತ್ನಿ ಪ್ರತಿಮಾಳ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ಕಾರ್ಕಳ ತಿರಸ್ಕರಿಸಿ ಮಾ.18ರಂದು ಆದೇಶ ನೀಡಿದೆ.
ನ್ಯಾಯಾಂಗ ಬಂಧನದಲ್ಲಿರುವ ಪ್ರತಿಮಾ ಸಲ್ಲಿಸಿರುವ ಜಾಮೀನು ಅರ್ಜಿಗೆ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ಆಕ್ಷೇಪಣೆ ಸಲ್ಲಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಸಮಿವುಲ್ಲಾ, ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಕೆ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ 2024ರ ಅ.20ರಂದು ತನ್ನ ಪತಿ ಬಾಲಕೃಷ್ಣ ಪೂಜಾರಿ ಅವರನ್ನು ಕೊಲೆ ಮಾಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಅ.25ರಂದು ಅಜೆಕಾರು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ಇನ್ನೋರ್ವ ಆರೋಪಿ ದಿಲೀಪ್ ಹೆಗ್ಡೆ ಜಾಮೀನು ಅರ್ಜಿಯನ್ನು ಇದೇ ನ್ಯಾಯಾಲಯ ಮಾ.4ರಂದು ತಿರಸ್ಕರಿಸಿ ಆದೇಶ ನೀಡಿತ್ತು.