ಕೋಡಿ ಉಪ್ಪುನೀರು ತಡೆ ಕಾಮಗಾರಿ ಪರಿಶೀಲನೆ: ಸಚಿವ ಭೋಸರಾಜು
ಕುಂದಾಪುರ, ಮಾ.19: ಕುಂದಾಪುರ ಪುರಸಭೆ ವ್ಯಾಪ್ತಿಯ ಕೋಡಿಯಲ್ಲಿ ಜನವಸತಿ ಪ್ರದೇಶಗಳಿಗೆ ಉಪ್ಪುನೀರು ನುಗ್ಗುತ್ತಿದ್ದು ಕೃಷಿ ಜಮೀನಿಗೆ ಹಾಗೂ ಮನೆಗಳಿಗೆ ತೊಂದರೆಯಾಗದಂತೆ ನದಿ ದಂಡ ಸಂರ ಕ್ಷಣೆ ಕೈಗೊಳ್ಳುವ ಕಾಮಗಾರಿಯ ಸ್ಥಳವು ಸಿಆರ್‌ಝಡ್ ವ್ಯಾಪ್ತಿಯಲ್ಲಿ ಬರುವುದರಿಂದ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದು ಕಾಮಗಾರಿಯನ್ನು ಕೈಗೊಳ್ಳುವ ಕುರಿತು ಪರಿಶೀಲಿಸಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಈ ಕಾಮಗಾರಿ ಪ್ರಸ್ತಾವನೆ ಯಾವ ಹಂತದಲ್ಲಿದೆ ಎಂಬ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಪ್ರಶ್ನೆಗೆ ಸಚಿವರು ಈ ರೀತಿ ಉತ್ತರ ನೀಡಿದರು.
ಕೋಡಿ ಪರಿಸರದಲ್ಲಿ ವರ್ಷಂಪ್ರತಿ ಉಪ್ಪುನೀರು ನುಗ್ಗುತ್ತಿದ್ದು ಕೃಷಿ ಜಮೀನು ಹಾನಿಯಾಗುವುದರೊಂದಿಗೆ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದ್ದು ಈ ಭಾಗದ ಗ್ರಾಮಸ್ಥರು ವಾಸ ಮಾಡಲು ಸಂಕಷ್ಟ ಪಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ ಕೋಡಿ ಪರಿಸರಕ್ಕೆ ಉಪ್ಪು ನೀರು ನುಗ್ಗದಂತೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಕೈಗೊಂಡ ಕ್ರಮಗಳೇನು ಎಂಬುದನ್ನು ತಿಳಿಸಲು ಶಾಸಕರು ಕೋರಿದ್ದರು.