ಬ್ರಹ್ಮಾವರ ಹೆದ್ದಾರಿ ಸಮಸ್ಯೆ| ಉಡುಪಿ ಜಿಲ್ಲಾಡಳಿತದ ನಿರ್ಧಾರಕ್ಕೆ ಶರ್ತಬದ್ಧ ಸ್ವಾಗತ: ರಾ.ಹೆದ್ದಾರಿ ಉಳಿಸಿ ಸಮಿತಿ

Update: 2025-04-09 19:29 IST
ಬ್ರಹ್ಮಾವರ ಹೆದ್ದಾರಿ ಸಮಸ್ಯೆ| ಉಡುಪಿ ಜಿಲ್ಲಾಡಳಿತದ ನಿರ್ಧಾರಕ್ಕೆ ಶರ್ತಬದ್ಧ ಸ್ವಾಗತ: ರಾ.ಹೆದ್ದಾರಿ ಉಳಿಸಿ ಸಮಿತಿ
  • whatsapp icon

ಬ್ರಹ್ಮಾವರ, ಎ.9: ಬ್ರಹ್ಮಾವರ ಹೆದ್ದಾರಿ ಸಮಸ್ಯೆ ಕುರಿತಂತೆ ಜಿಲ್ಲಾಡಳಿತ ಎ.8ರಂದು ಕರೆದ ಸಭೆಯಲ್ಲಿ ಬ್ರಹ್ಮಾವರದಲ್ಲಿ ಫ್ಲೈಓವರ್ ರಚಿಸುವುದಾಗಿ ಮತ್ತು ಭದ್ರಗಿರಿಯಿಂದ ಉಪ್ಪಿನಕೋಟೆ ತನಕ ಸರ್ವಿಸ್ ರಸ್ತೆ ಯನ್ನು ನಿರ್ಮಿಸುವ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದು, ಈ ತೀರ್ಮಾನವನ್ನು ಶರ್ತ ಬದ್ಧವಾಗಿ ಸ್ವಾಗತಿಸುವುದಲ್ಲದೆ ಹೆದ್ದಾರಿ ಸಮಸ್ಯೆ ಬಗ್ಗೆ ನಡೆಸಲು ಉದ್ದೇಶಿಸಿರುವ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡ ಲಾಗಿದೆ ಎಂದು ಬ್ರಹ್ಮಾವರ ತಾಲೂಕು ರಾಷ್ಟ್ರೀಯ ಹೆದ್ದಾರಿ-66 ಉಳಿಸಿ ಸಮಿತಿಯ ಸಂಚಾಲಕ ಬಿ.ಗೋವಿಂದರಾಜ್ ಹೆಗ್ಡೆ ಹೇಳಿದ್ದಾರೆ.

ಬ್ರಹ್ಮಾವರದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷದಲ್ಲಿ ಬ್ರಹ್ಮಾವರ ವ್ಯಾಪ್ತಿಯ ಮಹೇಶ್ ಹಾಸ್ಪಿಟಲ್ ಜಂಕ್ಷನ್, ಬಸ್‌ನಿಲ್ದಾಣ ಮತ್ತು ಆಕಾಶವಾಣಿ ಜಂಕ್ಷನ್‌ಗಳಲ್ಲಿ 50ಕ್ಕೂ ಮಿಕ್ಕಿ ಅಪಘಾತಗಳಾಗಿವೆ. ಭದ್ರಗಿರಿಯಿಂದ ಮಾಬುಕಳದವರೆಗೆ ಹೆದ್ದಾರಿಯ ಎರಡೂ ಭಾಗದಲ್ಲಿ ತುರ್ತಾಗಿ ಸರ್ವಿಸ್ ರಸ್ತೆಯನ್ನು ರಚಿಸಬೇಕು. ಕಾಲಮಿತಿ ಯೊಳಗೆ ಮೇಲ್ಸೇತುವೆ ನಿರ್ಮಿಸಬೇಕು. ಈ ಬಗ್ಗೆ 2013ರಿಂದಲೇ ಸಂಬಂಧಪಟ್ಟವರಿಗೆ ಮನವಿಗಳನ್ನು ನೀಡುತ್ತಾ ಬಂದಿದ್ದರೂ ಕೂಡಾ ಸೂಕ್ತ ಕ್ರಮ ಕೈಗೊಳ್ಳದ ಹೆದ್ದಾರಿ ಇಲಾಖೆಯ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹೆಗ್ಡೆ ಒತ್ತಾಯಿಸಿದರು.

90 ದಿನಗಳಲ್ಲಿ ಈ ಮೂರು ಬೇಡಿಕೆಗಳನ್ನು ಈಡೇರಿಸುವ ಇಚ್ಚಾಶಕ್ತಿ ತೋರದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ. ಅಲ್ಲದೆ ಹೆದ್ದಾರಿ ಇಲಾಖೆಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯತೆಗಳನ್ನು ಸಮಿತಿ ಪರಿಶೀಲಿಸುತ್ತಿದೆ ಎಂದು ಅವರು ವಿವರಿಸಿದರು.

ಹೆದ್ದಾರಿ ಹೋರಾಟದ ಕುರಿತು ರಾಷ್ಟ್ರೀಯ ಹೆದ್ದಾರಿ-66 ಉಳಿಸಿ ಸಮಿತಿ 2007ರಿಂದಲೇ ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದೆ. ಹೆದ್ದಾರಿ ದುರಸ್ತಿ ಮತ್ತು ಅಗಲೀಕರಣಕ್ಕಾಗಿ ಪಕ್ಷಾತೀತವಾಗಿ ಹೆದ್ದಾರಿ ಬಂದ್ ಮತ್ತು ಇನ್ನಿತರ ವಿಧಾನಗಳ ಮೂಲಕ ಹೋರಾಟ ಮಾಡಿದೆ. ಕುಂದಾಪುರದಿಂದ ಸುರತ್ಕಲ್‌ ವರೆಗೆ ನಾಲ್ಕು ಪಥದ ರಸ್ತೆ ರಚನೆ ಈ ಜಿಲ್ಲೆಯ ಜನತೆಯ ಬಹುದಿನದ ಬೇಡಿಕೆ. ಇದಕ್ಕಾಗಿ 2007 ಮತ್ತು 2010 ರಲ್ಲಿ ಹೆದ್ದಾರಿ ದುರಸ್ತಿ ಮತ್ತು ಅಗಲೀಕರಣಕ್ಕೆ ಸಂಬಂಧಿಸಿ ಶಿರೂರಿನಿಂದ ಹೆಜಮಾಡಿ ತನಕ ಬೆಳಿಗ್ಗೆ 6:00ರಿಂದ ಸಂಜೆ 6:00ರವರೆಗೆ ಜಿಲ್ಲೆಯ ಸಂಘ ಸಂಸ್ಥೆಗಳ ನೆರವಿನಿಂದ ಹೆದ್ದಾರಿ ಬಂದ್ ಸಹ ಮಾಡಿ ಪ್ರತಿಭಟಿಸಲಾಗಿತ್ತು ಎಂದವರು ನೆನಪಿಸಿದರು.

ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು 2010ರ ಮಾ.9 ರಲ್ಲಿ ರಸ್ತೆ ಅಗಲೀಕರಣ ಬಗ್ಗೆ ನವಯುಗ ಕಂಪೆನಿ ಜೊತೆ 90.08 ಕಿ.ಮೀ ಉದ್ದದ 4 ಪಥದ ರಸ್ತೆ ರಚನೆಗೆ 671 ಕೋಟಿ ರೂ. ಗಳ ಪ್ರಸ್ತಾವನೆಗೆ ಒಪ್ಪಂದ ಏರ್ಪಟ್ಟು ಅದೇ ವರ್ಷದಲ್ಲಿ ಕಾಮಗಾರಿ ಪ್ರಾರಂಭಗೊಂಡಿತ್ತು. ಉಡುಪಿ ಜಿಲ್ಲೆಯಲ್ಲಿ ಒಟ್ಟು 88.27 ಹೆಕ್ಟೇರ್ ಭೂಮಿಗೆ 3ಡಿ ನೋಟಿಫಿಕೇಶನ್ ಆಗಿದ್ದು ಆರು ಪಥದ ರಸ್ತೆಗೋಸ್ಕರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದರಲ್ಲಿ ಮುಖ್ಯ ರಸ್ತೆ, ಸರ್ವಿಸ್ ರಸ್ತೆ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಅಳವಡಿಸುವ ಉದ್ದೇಶವಿತ್ತು ಎಂದರು.

ಹೆದ್ದಾರಿ ರಚನೆ ಸಂದರ್ಭ ಬ್ರಹ್ಮಾವರ ಪ್ರದೇಶದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸ್ಥಳೀಯ ಜನಪ್ರತಿನಿಧಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೊಸದಿಲ್ಲಿ, ಬೆಂಗಳೂರು, ಮಂಗಳೂರು ಜಿಲ್ಲೆಯ ಜಿಲ್ಲಾಧಿಕಾರಿಯವರು, ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಸಂಬಂಧಿಸಿದ ಇತರ ಅಧಿಕಾರಿಗಳಿಗೆ 2013 ರಿಂದಲೇ ಮನವಿಯನ್ನು ನೀಡಿದ್ದೇವೆ. 2011ರಲ್ಲಿ ಬ್ರಹ್ಮಾವರದ ಉದ್ದೇಶಿತ ಎಂಬ್ಯಾಕ್ಮೆಂಟ್ ಬದಲಾವಣೆಯಾಗಿ ಕ್ಯಾಟಲ್ ಪಾಸ್ ಯಾಕೆ ಆಯಿತು ಎನ್ನುವುದು ಪ್ರಸ್ತುತ ಬಹಿರಂಗಪಡಿಸಲಾಗದ ವಿಚಾರ ಎಂದೂ ಗೋವಿಂದರಾಜ ಹೆಗ್ಡೆ ಹೇಳಿದರು.

ಹಲವು ಹೋರಾಟ ಮಾಡಿದ್ದರೂ, ಹೆದ್ದಾರಿ ಪ್ರಾಧಿಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಇತ್ತೀಚೆಗಿನ ವರ್ಷಗಳಲ್ಲಿ ಸಾಕಷ್ಟು ಅಪಘಾತಗಳಾಗಿ ಸಾವು, ನೋವುಗಳು ಸಂಭವಿಸಿರುವುದು ವಿಷಾದನೀಯ. ಬ್ರಹ್ಮಾವರದ ಫ್ಲೈಓವರ್ ವಿಷಯದಲ್ಲಿ ಕೆಲವೊಂದು ಊಹಾಪೋಹಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದು, ಕೌ ಪಾಸ್ ರಚನೆ ಆಗುತ್ತಿದ್ದ ಸಂದರ್ಭದಲ್ಲಿ ಅಂದಿನ ಲೋಕಸಭಾ ಸದಸ್ಯ ಕೆ.ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಅಂದಿನ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ರಾಷ್ಟ್ರೀಯ ಹೆದ್ದಾರಿ-66 ಉಳಿಸಿ ಸಮಿತಿಯಿಂದ ಮನವಿ ನೀಡಲಾಗಿತ್ತು ಎಂದೂ ನುಡಿದರು.

ಅಂದಿನ ಹೆದ್ದಾರಿ ಸಚಿವರಾಗಿದ್ದ ದಿ. ಆಸ್ಕರ್ ಫೆರ್ನಾಂಡೀಸ್ ಅವರಿಗೆ ಪತ್ರವೊಂದನ್ನು ಬರೆದು 7 ಪಿಲ್ಲರ್‌ಗಳ ಫ್ಲೈಓವರ್‌ನ್ನು ಬ್ರಹ್ಮಾವರದಲ್ಲಿ ರಚಿಸಲು ಸಮಿತಿ ವತಿಯಿಂದ ವಿನಂತಿಸಲಾಗಿತ್ತು ಎಂದೂ ಅವರು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ರಾ. ಹೆದ್ದಾರಿ-66 ಉಳಿಸಿ ಸಮಿತಿ ಪ್ರಮುಖರಾದ ನಿರಂಜನ್ ಶೆಟ್ಟಿ, ಗಣೇಶ್ ಶ್ರೀಯಾನ್, ಪ್ರತೀಕ್ ಹೆಗ್ಡೆ, ಜಾಯ್ಸನ್ ವೆರೊನ್ ಬಾಂಜ್ ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News