ಮುಂದಿನ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧಿ ಅಲ್ಲ: ಕೆ.ಅಣ್ಣಾಮಲೈ

ಉಡುಪಿ, ಎ.9: ನಮ್ಮ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ವಿಚಾರ ಬರುವುದಿಲ್ಲ. ಆದರೆ ಯಾವುದೇ ಕ್ಷಣವೂ ನಡೆಯಬಹುದಾದ ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಹಿರಿಯ ಪೊಲೀಸ್ ಅಧಿಕಾರಿ, ಹಾಲಿ ಬಿಜೆಪಿ ಮುಖಂಡ ಹಾಗೂ ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.
ಉಡುಪಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಉಡುಪಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಅಣ್ಣಾಮಲೈ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಮುಂದಿನ ತಮಿಳುನಾಡು ವಿಧಾನಸಭಾಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಹಾಗೂ ಅಣ್ಣಾಡಿಎಂಕೆ ಪಕ್ಷದ ನಡುವೆ ಮತ್ತೆ ಚುನಾವಣಾ ಹೊಂದಾಣಿಕೆಯ ಪ್ರಯತ್ನ ಹೊಸದಿಲ್ಲಿಯಲ್ಲಿ ನಡೆಯುತಿದ್ದು, ಈ ಹಿನ್ನೆಲೆ ಯಲ್ಲಿ ಅಣ್ಣಾಮಲೈ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಬಗ್ಗೆ ತಮಿಳುನಾಡಿನಲ್ಲಿ ಭಾರೀ ಚರ್ಚೆಗಳಾಗುತ್ತಿವೆ.

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ, ನೋಡಿ ನಾವೆಲ್ಲ ರಾಷ್ಟ್ರೀಯ ಪಕ್ಷದ ಸದಸ್ಯರು. ನಾನೊಬ್ಬ ಕಾರ್ಯಕರ್ತ. ಪಕ್ಷ ನನಗೆ ಕೆಲವು ಜವಾಬ್ದಾರಿ ಕೊಟ್ಟಿತ್ತು. ಈಗ ಇನ್ನೊಂದು ಜವಾಬ್ದಾರಿ ಕೊಟ್ಟಿದ್ದಾರೆ. ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಕೆಲಸ ಮಾಡುವುದು ಮಾತ್ರ ನನ್ನ ಕರ್ಮ. ಏನೇ ಅವಕಾಶಕೊಟ್ಟರು ಕೆಲಸ ಮಾಡುತ್ತೇನೆ ಎಂದರು.
ತಮಿಳುನಾಡಿನಲ್ಲಿ ಚುನಾವಣೆ ಬರುತಿದೆ. ಕೇಂದ್ರ ಗೃಹ ಮಂತ್ರಿಯವರನ್ನು ತಮಿಳುನಾಡು ವಿಪಕ್ಷ ನಾಯಕ ಅಣ್ಣಾಡಿಎಂಕೆಯ ಪಳನಿಸ್ವಾಮಿ ಭೇಟಿಯಾಗಿದ್ದಾರೆ. ಗೃಹ ಸಚಿವರು ಮೈತ್ರಿಯ ಬಗ್ಗೆ ಮಾತನಾ ಡಿದ್ದಾರೆ. ಎಐಡಿಎಂಕೆ ಕುರಿತ ನನ್ನ ನಿಲುವು ಎಲ್ಲರಿಗೂ ಗೊತ್ತೇ ಇದೆ. ಡಿಎಂಕೆಯನ್ನು ಅಧಿಕಾರದಿಂದ ಇಳಿಸುವುದು ಎಲ್ಲರ ಉದ್ದೇಶ. ನಮ್ಮ ನಂಬರ್ ಒನ್ ಕಾರ್ಯಕ್ರಮ ಸಹ ಅದೇ ಎಂದು ಅಣ್ಣಾಮಲೈ ವಿವರಿಸಿದರು.
ಎಐಡಿಎಂಕೆ ಬಹಳ ದೊಡ್ಡ ದ್ರಾವಿಡಿಯನ್ ಪಕ್ಷ. ಕೇಂದ್ರ ಗೃಹ ಸಚಿವ ಅಮಿಷಾ ಶಾ ಅವರು ವಿಪಕ್ಷ ನಾಯಕರನ್ನು ಭೇಟಿ ಆಗಿರುವುದರಿಂದ ಸಂದೇಶ ಸ್ಪಷ್ಟವಾಗಿದೆ. ಎಐಎಡಿಎಂಕೆ ಬಿಜೆಪಿ ಜೊತೆ ಮತ್ತೆ ಮೈತ್ರಿ ಬಯಸುತ್ತಿದೆ ಎಂಬುದೇ ಈ ಸಂದೇಶ. ಗೃಹ ಸಚಿವರು ಮೈತ್ರಿಯ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಎಲ್ಲಿ ಇರಬೇಕು ಯಾವ ಸ್ಥಾನದಲ್ಲಿ ಇರಬೇಕು ಎಂಬುದು ಪಕ್ಷಕ್ಕೆ ಗೊತ್ತಿದೆ. ಮೈತ್ರಿಗೆ ಯಾವುದು ಸರಿಯಾದ ನಿಲುವು ಎಂದು ಪಕ್ಷಕ್ಕೆ ಗೊತ್ತಿದೆ. ಏನೇ ತೀರ್ಮಾನ ತೆಗೆದುಕೊಂಡರೂ ನಾನೊಬ್ಬ ಕಾರ್ಯಕರ್ತ ಎಂದು ಅವರು ಸುತ್ತುಬಳಸಿ ರಾಜೀನಾಮೆ ನೀಡಿರುವುದನ್ನು ಒಪ್ಪಿಕೊಂಡಿದ್ದಲ್ಲದೇ ಮತ್ತೆ ಆ ಸ್ಥಾನ ಪಡೆಯದಿರುವ ಇಂಗಿತವನ್ನು ಹೊರಹಾಕಿದರು.

ಇನ್ನೂ 20ವರ್ಷ ಕಾಯಲು ಸಿದ್ಧ: ತಮಿಳುನಾಡಿನಲ್ಲಿ ಬದಲಾವಣೆ ಆಗಲಿದೆ. ನಮ್ಮ ಪಕ್ಷಕ್ಕೆ ಇನ್ನೊಂದು ಅವಕಾಶ ಸಿಗಬಹುದು. ಮಹಾರಾಷ್ಟ್ರ, ಒರಿಸ್ಸಾ ರಾಜ್ಯಗಳಲ್ಲಿ ದೀಘಕಾಲದ ಪ್ರಾಮಾಣಿಕ ಪ್ರಯತ್ನದಿಂದ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅದೇ ರೀತಿ ತಮಿಳುನಾಡು ಸಹ ಒಂದು ಸುದೀರ್ಘ ಕಾಲದ ಆಟ. ಬಹಳ ವರ್ಷದಿಂದ ನಾವು ತಾಳ್ಮೆಯಿಂದ ಕಾದಿದ್ದೇವೆ, ಇನ್ನೂ ಕಾಯುತ್ತೇವೆ. ಇನ್ನು 20 ವರ್ಷ, 30 ವರ್ಷ ಬೇಕಾದರೂ ಆಗಲಿ ಅಧಿಕಾರಕ್ಕೆ ಬರುತ್ತೇವೆ ಎಂದವರು ದೃಢ ವಿಶ್ವಾಸದಿಂದ ನುಡಿದರು.
ಪಕ್ಷದ ನಿರ್ಧಾರಕ್ಕೆ ಕಾರ್ಯಕರ್ತನಾಗಿ ಒಪ್ಪಿಗೆ ಕೊಡಬೇಕು. ಪಕ್ಷ ರಾಷ್ಟ್ರೀಯ ಮಟ್ಟದಿಂದ ಆಲೋಚನೆ ಮಾಡುತ್ತದೆ. ಡಿಎಂಕೆ ಎಷ್ಟು ಗಲೀಜು ಸರಕಾರ ಮಾಡುತ್ತಿದೆ ನೋಡಿದ್ದೀರಿ. 13 ಸಚಿವರ ಮೇಲೆ ಭ್ರಷ್ಟಾಚಾರ ಪ್ರಕರಣ ನ್ಯಾಯಾಲಯದಲ್ಲಿದೆ. ಒಬ್ಬ ಮಂತ್ರಿ ಒಂದುವರೆ ವರ್ಷ ಜೈಲಿನಲ್ಲಿದ್ದು ಮತ್ತೆ ಮಂತ್ರಿಯಾಗಿದ್ದಾರೆ. ದೀರ್ಘಕಾಲಿನ ದೃಷ್ಟಿಕೋನದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ರಾಜಕೀಯದಲ್ಲಿ ತಾಳ್ಮೆ ಮುಖ್ಯ: ರಾಜಕೀಯದಲ್ಲಿ ಅಧಿಕಾರಕ್ಕಿಂತ ತಾಳ್ಮೆ ಮುಖ್ಯ. ತಾಳ್ಮೆಯಿಂದ ಕಾರ್ಯ ಕರ್ತನಾಗಿ ಕೆಲಸ ಮಾಡುತ್ತೇನೆ. ನರೇಂದ್ರ ಮೋದಿ, ಅಮಿತ್ ಶಾ ಹಾಗೂ ರಾಷ್ಟ್ರೀಯ ನಾಯಕರು ತಮ್ಮದೇ ಆದ ದೂರದೃಷ್ಟಿಯ ಯೋಜನೆ ಹಾಕಿಕೊಂಡಿದ್ದಾರೆ. ತಮಿಳುನಾಡು ಈಸ್ ಲಾಂಗ್ ಟರ್ಮ್ ಗೇಮ್ ಎಂದ ಅಣ್ಣಾಮಲೈ, ಒಂದಲ್ಲ ಒಂದು ದಿನ ಬಿಜೆಪಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ಆದರೆ ಮುಂದಿನ ರಾಜ್ಯ ಅಧ್ಯಕ್ಷ ಚುನಾವಣೆ ಆಗುವಾಗ ನಾನು ಸ್ಪರ್ಧೆಯಲ್ಲಿ ಇರಲ್ಲ. ಈ ಚುನಾವಣೆ ಯಾವಾಗ ಬೇಕಿದ್ದರೂ ಆಗಬಹುದು ಎಂದು ಅಣ್ಣಾಮಲೈ ನುಡಿದರು.