ಕೇಂದ್ರದ ಬೆಲೆ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ: ಸ್ಥಳದಲ್ಲಿ ಸೌದೆಯಿಂದ ಒಲೆ ಉರಿಸಿ ಚಹಾ ತಯಾರಿಸಿ ಆಕ್ರೋಶ

Update: 2025-04-09 20:38 IST
ಕೇಂದ್ರದ ಬೆಲೆ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ: ಸ್ಥಳದಲ್ಲಿ ಸೌದೆಯಿಂದ ಒಲೆ ಉರಿಸಿ ಚಹಾ ತಯಾರಿಸಿ ಆಕ್ರೋಶ
  • whatsapp icon

ಉಡುಪಿ: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ, ಉಡುಪಿ ಬ್ಲಾಕ್ ಮತ್ತು ಬ್ರಹ್ಮಾವರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಕೇಂದ್ರ ಬಿಜೆಪಿ ಸರಕಾರದ ಪೆಟ್ರೋಲ್, ಡಿಸೇಲ್ ಮತ್ತು ಎಸ್‌ಪಿಜಿ ಗ್ಯಾಸ್ ಬೆಲೆ ಏರಿಕೆಯನ್ನು ಖಂಡಿಸಿ ಬುಧವಾರ ಅಜ್ಜರಕಾಡು ಹುತಾತ್ಮ ಸ್ಮಾರಕ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರತಿನಿಭಟನನಿರತ ಮಹಿಳೆಯರು ಸ್ಥಳದಲ್ಲಿ ಸೌದೆಯಿಂದ ಒಲೆ ಉರಿಸಿ ಚಹಾ ತಯಾರಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಗ್ಯಾಸ್ ಸಿಲಿಂಡರ್‌ನ್ನು ಪ್ರದರ್ಶಿಸಲಾಯಿತು. ಪ್ರತಿಭಟನಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಕೇಂದ್ರ ಸರಕಾರದ ಬೆಲೆ ಏರಿಕೆ ಮಧ್ಯೆ ರಾಜ್ಯದಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪಾದವಾಗಿದೆ. ಕೇಂದ್ರ ಸರಕಾರದ ಆಡಳಿತ ವೈಫಲ್ಯ ಹಾಗೂ ಆರ್ಥಿಕ ನೀತಿಯಿಂದ ಆರ್ಥಿಕ ವ್ಯವಸ್ಥೆ ನಿಯಂತ್ರಣ ತಪ್ಪಿದೆ. ಇದರಿಂದ ಜನಸಾಮಾನ್ಯ ಬದುಕು ತತ್ತರ ಆಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ನರೇಂದ್ರ ಮೋದಿ ಸರಕಾರ ಬಂದ ನಂತರ ಜನರ ಹಣವನ್ನು ಬೇರೆ ಬೇರೆ ರೂಪದಲ್ಲಿ ಲೂಟಿ ಮಾಡುತ್ತಿದೆ. ಬಿಜೆಪಿ ಅಚ್ಚೆದ್ದಿನ್ ಹೇಳಿರುವುದು ಮಾತ್ರ ನಿಜವಾದ ಅಚ್ಚೆದಿನ್ ಕೊಟ್ಟದ್ದು ನಮ್ಮ ಕಾಂಗ್ರೆಸ್ ಸರಕಾರ. ಸರಕಾರದ ಆರ್ಥಿಕ ನೀತಿಯಿಂದ ಸಣ್ಣಸಣ್ಣ ಕೈಗಾರಿಕೆಗಳು ನಾಶವಾಗಿ ಸುಮಾರು 11ಕೋಟಿ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಮೂಲಕ ಜನರ ಆದಾಯವನ್ನು ಕಸಿದು ಕೊಂಡಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸುರಯ್ಯ ಅಂಜುಮ್, ಉಡುಪಿ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಜ್ಜನ್, ಬ್ರಹ್ಮಾವರ ಯುವ ಕಾಂಗ್ರೆಸ್ ಅಧ್ಯಕ್ಷ ಜಾಯ್ಸನ್, ಮುಖಂಡ ರಾದ ಅಣ್ಣಯ್ಯ ಶೇರಿಗಾರ್, ಗಣೇಶ್ ನೆರ್ಗಿ, ಹರೀಶ್ ಕಿಣಿ, ಮಮತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಶಬರೀಶ್ ಸುವರ್ಣ, ಅಝೀಝ್ ಹೆಜಮಾಡಿ, ಯತೀಶ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News