ದಲಿತ ವ್ಯಕ್ತಿಗೆ ಜಾತಿ ನಿಂದಿಸಿ ಹಲ್ಲೆ ಪ್ರಕರಣ: ಆರೋಪಿಗೆ ಜೈಲುಶಿಕ್ಷೆ

ಉಡುಪಿ: ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಪ್ರಕರಣದ ಆರೋಪಿಗೆ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ಎ.5ರಂದು ಆದೇಶ ನೀಡಿದೆ.
ನಾಲ್ಕೂರು ಗ್ರಾಮದ ನಿವಾಸಿ ಮಂಜುನಾಥ ಮಡಿವಾಳ ಶಿಕ್ಷೆಗೆ ಗುರಿಯಾದ ಆರೋಪಿ. 2019ರ ಮೇ 6ರಂದು ಮುದ್ದೂರು ಎಂಬಲ್ಲಿ ನಾಲ್ಕೂರು ಗ್ರಾಮದ ಮುದ್ದೂರು ನಿವಾಸಿ ಪರಿಶಿಷ್ಟ ಜಾತಿಗೆ ಸೇರಿದ ವಿಠಲ ಪರವ ಎಂಬವರಿಗೆ ಆರೋಪಿ ಮಂಜುನಾಥ ಮಡಿವಾಳ ಎಂಬಾತ ರಿಕ್ಷಾದಲ್ಲಿ ಬಂದು ಜಾತಿ ನಿಂದನೆ ಮಾಡಿ ಬೈದು ಸೋಡಾ ಬಾಟಲಿಯಿಂದ ತಲೆಗೆ ಹೊಡೆದು ಗಾಯ ಗೊಳಿಸಿ ಕೊಲೆ ಬೆದರಿಕೆ ಹಾಕಿದ್ದನು ಎಂದು ದೂರಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರ ಕಾರ್ಕಳ ಉಪ ವಿಭಾಗದ ಅಂದಿನ ಸಹಾಯಕ ಪೊಲೀಸ್ ಅಧೀಕ್ಷಕ ಪಿ.ಕೃಷ್ಣಕಾಂತ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್ ಆರೋಪಿತ ತಪ್ಪಿತಸ್ಥ ಎಂದು ತಿರ್ಮಾನಿಸಿ ಆರೋಪಿಗೆ ಭಾ.ದಂ.ಸಂ ಕಲಂ 323, 504 ಹಾಗೂ ಎಸ್.ಸಿ/ಎಸ್.ಟಿ ಕಾಯ್ದೆಯಡಿ ಅಪರಾಧಕ್ಕಾಗಿ ಪ್ರತಿಯೊಂದು ಅಪರಾಧಕ್ಕೆ 6 ತಿಂಗಳ ಸಾದಾ ಶಿಕ್ಷೆ ಮತ್ತು 2,500ರೂ. ದಂಡ ಹಾಗೂ ಕಲಂ 324, 506 ಹಾಗೂ ಎಸ್.ಸಿ/ಎಸ್.ಟಿ ಕಾಯ್ದೆಯಡಿಯ ಅಪರಾಧಕ್ಕಾಗಿ ಪ್ರತಿಯೊಂದು ಅಪರಾಧಕ್ಕೆ 1 ವರ್ಷ ಸಾದಾ ಶಿಕ್ಷೆ ಮತ್ತು 3,000ರೂ. ದಂಡ ವಿಧಿಸಿ ಆದೇಶ ನೀಡಿದರು.
ಆರೋಪಿಯಿಂದ ವಸೂಲಾದ ದಂಡದ ಮೊತ್ತದ ಪೈಕಿ 10,000ರೂ. ವನ್ನು ದೂರುದಾರರಿಗೆ ಪರಿಹಾರ ರೂಪದಲ್ಲಿ ಪಾವತಿಸಬೇಕೆಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದಾರೆ.