ದೇಶದಲ್ಲಿ ಕ್ರೀಡಾ ಸಂಸ್ಕೃತಿ ಬೆಳೆಸಲು ಆದ್ಯತೆ ನೀಡಿ: ಕೆ.ಅಣ್ಣಾಮಲೈ

ಉಡುಪಿ, ಎ.9: ಕ್ರೀಡಾ ಸಾಧನೆ ಆರೋಗ್ಯವಂತ ಸಮಾಜದ ಹೆಗ್ಗುರುತು. ದೇಶದಲ್ಲಿ ಕ್ರೀಡಾ ಸಂಸ್ಕೃತಿ ಯನ್ನು ಬೆಳೆಸುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು. 2036ರಲ್ಲಿ ದೇಶದಲ್ಲಿ ಮೊದಲ ಬಾರಿ ಒಲಿಂಪಿಕ್ಸ್ ಕ್ರೀಡೆಯನ್ನು ಸಂಘಟಿಸುವ ಗುರಿ ಹೊಂದಿರುವ ನಮಗೆ ಇದು ಆದ್ಯತೆಯಾಗಬೇಕು ಎಂದು ಮಾಜಿ ಪೊಲೀಸ್ ಅಧಿಕಾರಿ ಕೆ.ಅಣ್ಣಾಮಲೈ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ನೂತನವಾಗಿ ಜರ್ಮನ್ ಹ್ಯಾಂಗರ್ ತಂತ್ರಜ್ಞಾನದಲ್ಲಿ ನಿರ್ಮಾಣ ಗೊಂಡಿರುವ ಶ್ರೀವಿಬುಧೇಶತೀರ್ಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಉದ್ಘಾಟನೆಗೊಂಡ 2024-25ನೇ ಸಾಲಿನ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಚಾಂಪಿಯನ್‌ಷಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಚೀನಾ ತನ್ನ ನೆಲದಲ್ಲಿ ಮೊದಲ ಬಾರಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಿದಾಗ, ಪದಕ ಪಟ್ಟಿ ಯಲ್ಲಿ ಮೊದಲ ಬಾರಿಗೆ ಅಮೆರಿಕದ ಏಕಸ್ವಾಮ್ಯವನ್ನು ಮುರಿದಿತ್ತು. ಅದೇ ರೀತಿ ನಾವು ಸಹ ಸುಸ್ಥಿರವಾದ ಕ್ರೀಡಾ ಸಂಸ್ಕೃತಿಯನ್ನು ಭಾರತೀಯರಲ್ಲಿ ಅಳವಡಿಸಿಕೊಳ್ಳುವ ಮೂಲಕ ಕನಿಷ್ಠ್ಠ 150ರಿಂದ 200 ಪದಕ ಗೆಲ್ಲುವ ಗುರಿಯೊಂದಿಗೆ 2036ರ ಒಲಿಂಪಿಕ್ಸ್‌ನ್ನು ಆಯೋಜಿಸಲು ಯೋಜನೆ ರೂಪಿಸಬೇಕು ಎಂದರು.
ಉಡುಪಿ ಶ್ರೀಅದಮಾರು ಮಠದ ಯತಿವರ್ಯರಾದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರು ದೀಪ ಬೆಳಗಿಸುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ ನಾಲ್ಕು ವಲಯಗಳಿಂದ ಬಂದಿರುವ ದೇಶದ ಬಲಿಷ್ಠ 16 ವಿವಿ ತಂಡಗಳು ಪಾಲ್ಗೊಂಡಿರುವ ಟೂರ್ನಿಗೆ ಚಾಲನೆ ನೀಡಿದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಮಂಗಳೂರಿನ ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಕೃಷ್ಣನ್ ಎಚ್, ಉಡುಪಿ ಅದಮಾರು ಮಠ ಶಿಕ್ಷಣ ಸಂಸ್ಥೆ ಬೆಂಗಳೂರಿನ ಗೌರವ ಕಾರ್ಯದರ್ಶಿ ಡಾ.ಎ.ಪಿ.ಭಟ್, ಕಾಲೇಜು ಆಡಳಿತ ಮಂಡಳಿಯ ಗೌರವ ಖಜಾಂಜಿ ಸಿ.ಎ.ಪ್ರಶಾಂತ್ ಹೊಳ್ಳ, ಪೂರ್ಣಪ್ರಜ್ಞ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಶ್ರೀರಮಣ ಐತಾಳ್, ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕಿಶೋರ್ ಕುಮಾರ್ ಸಿ.ಕೆ., ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಟೂರ್ನಿ ಸಂಘಟನಾ ಕಾರ್ಯದರ್ಶಿ ಯಾಗಿರುವ ಡಾ. ಜೆರಾಲ್ಡ್ ಸಂತೋಷ್ ಡಿಸೋಜ, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿದೇರ್ಶಕ ಸುಕುಮಾರ್ ಉಪಸ್ಥಿತರಿದ್ದರು.
ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್ ಚಂದ್ರಶೇಖರ್ ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ. ರಾಮು ಎಲ್. ವಂದಿಸಿದರು. ವಿದ್ಯಾರ್ಥಿನಿ ಶ್ರೀರಕ್ಷಾ ಹೆಗಡೆ ಪ್ರಾರ್ಥಿಸಿದರೆ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್ ಶೆಟ್ಟಿ ನಿರೂಪಿಸಿದರು.