ಅಖಿಲ ಭಾರತ ಅಂತರ ವಿವಿ ಪುರುಷರ ಖೋ-ಖೋ: ಆತಿಥೇಯ ಮಂಗಳೂರು ಶುಭಾರಂಭ; ದಾವಣಗೆರೆಗೆ ಸೋಲು

ಉಡುಪಿ, ಎ.9: ನಗರದ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನೂತನವಾಗಿ ಜರ್ಮನ್ ಹ್ಯಾಂಗರ್ ತಂತ್ರಜ್ಞಾನ ದಲ್ಲಿ ನಿರ್ಮಾಣಗೊಂಡಿರುವ ಶ್ರೀವಿಬುಧೇಶತೀರ್ಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಪ್ರಾರಂಭಗೊಂಡಿರುವ ಅಖಿಲ ಭಾರತ ಅಂತರ ವಿವಿ ಪುರುಷರ ಖೋ-ಖೋ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಆತಿಥೇಯ ಮಂಗಳೂರು ವಿಶ್ವವಿದ್ಯಾನಿಲಯ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ದಿಲ್ಲಿ ವಿವಿ ತಂಡವನ್ನು 21-15 ಅಂಕಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಶುಭಾರಂಭ ಮಾಡಿದೆ.
ಕಳೆದ ಬಾರಿಯ ಟೂರ್ನಿಯಲ್ಲಿ ಮುಂಬಯಿ ವಿವಿಯೊಂದಿಗೆ ಜಂಟಿಯಾಗಿ ಮೂರನೇ ಸ್ಥಾನವನ್ನು ಹಂಚಿ ಕೊಂಡಿದ್ದ ಹಾಗೂ ಈ ಬಾರಿ ದಕ್ಷಿಣ ವಲಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿರುವ ಮಂಗಳೂರು ವಿವಿ, ದಿಲ್ಲಿ ವಿವಿ ವಿರುದ್ಧ ಹೆಚ್ಚಿನ ಪ್ರತಿರೋಧವಿಲ್ಲದೇ ಜಯಗಳಿಸಿತು.
ಆದರೆ ದಕ್ಷಿಣ ವಲಯದಿಂದ ಸ್ಪರ್ಧಿಸಿರುವ ರಾಜ್ಯದ ಇನ್ನೊಂದು ತಂಡವಾದ ದಾವಣಗೆರೆ ವಿವಿಯನ್ನು ಬಲಿಷ್ಠ ಮುಂಬಯಿ ವಿವಿ 16-14 ಅಂಕಗಳ ಅಂತರದಿಂದ ರೋಚಕವಾಗಿ ಹಿಮ್ಮೆಟ್ಟಿಸಿತು. ಜಿದ್ದಾಜಿದ್ದಿನ ಹೋರಾಟ ಕಂಡುಬಂದ ದಿನದ ಆರನೇ ಪಂದ್ಯದಲ್ಲಿ ಮುಂಬಯಿ ವಿವಿ, ಕೊನೆಯ ಕ್ಷಣದಲ್ಲಿ ತನ್ನ ದೃಢತೆಯಿಂದ ಆಡಿ ಜಯಗಳಿಸಿತು.
ದಿನದ ಮೊದಲ ಪಂದ್ಯದಲ್ಲಿ ಕಾನ್ಪುರದ ಸಿಎಸ್‌ಜೆಎಂ ವಿವಿ, ದಕ್ಷಿಣ ವಲಯದಿಂದ ತೇರ್ಗಡೆಗೊಂಡಿದ್ದ ಕೇರಳ ವಿವಿಯನ್ನು ಅತ್ಯಂತ ರೋಮಾಂಚ ಕಾರಿಯಾಗಿ ಒಂದು ಅಂಕದಿಂದ ಹಿಮ್ಮೆಟ್ಟಿಸಿ ಪೂರ್ಣ ಅಂಕ ಸಂಪಾದಿಸಿತು. ಕಾನ್ಪುರ ತಂಡ ಅಂತಿಮವಾಗಿ 14-13ರ ಅಂತರದ ಜಯ ದಾಖಲಿಸಿತು.
ಉಳಿದಂತೆ ಪೂರ್ವ ವಲಯ ಛತ್ತೀಸ್‌ಗಢದ ಪಂಡಿತ್ ರವಿಶಂಕರ್ ಶುಕ್ಲ ವಿವಿ ತಂಡ ಮಹಾರಾಷ್ಟ್ರದ ಡಾ.ಬಿಎಎಂ ವಿವಿ ತಂಡದಿಂದ 19-13 ಅಂಕಗಳ ಅಂತರಿಂದ ಸೋಲನನುಭವಿಸಿದರೆ, ಮಹಾರಾಷ್ಟ್ರ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿ, ಛತ್ತೀಸ್‌ಗಂಢದ ಹೇಮಚಂದ ಯಾದವ್ ವಿಶ್ವವಿದ್ಯಾಲಯ ತಂಡವನ್ನು 24-14 ಅಂಕಗಳ ಅಂತರದಿಂದ ಏಕಪಕ್ಷೀಯ ವಾಗಿ ಪರಾಭವಗೊಳಿಸಿತು.
ಒರಿಸ್ಸಾ ಭುವನೇಶ್ವರದ ಕೆಐಐಟಿ ವಿವಿ, ಅಮೃತಸರದ ಜಿಎನ್‌ಡಿ ವಿವಿಯನ್ನು 21-20ರಿಂದ ಹಿಮ್ಮೆಟ್ಟಿಸಿ ಮೊದಲ ಜಯ ದಾಖಲಿಸಿದರೆ, ಕಳೆದ ಬಾರಿಯ ರನ್ನರ್‌ಅಪ್ ನಂದೇಡ್‌ನ ಎಸ್‌ಆರ್‌ಟಿಎಂ ವಿವಿ, ಒಡಿಸ್ಸಾದ ಗಂಗಾಧರ್ ಮೆಹರ್ ವಿವಿಯನ್ನು 18-16ರ ಅಂತರದಿಂದ ಸೋಲಿಸಿತು.
ಉತ್ತರ ವಲಯ ಜಲಂಧರ್‌ನ ಎಲ್‌ಪಿ ವಿವಿ, ದಕ್ಷಿಣದ ತಮಿಳುನಾಡಿನ ಭಾರತಿಯಾರ್ ವಿವಿಯನ್ನು 16-14ರಿಂದ ಸೋಲಿಸಿತು. ರಾತ್ರಿ ನಡೆದ ದಿನ ಒಂಭತ್ತನೇ ಪಂದ್ಯದಲ್ಲಿ ಪಂಡಿತ್ ರವಿಶಂಕರ್ ಶುಕ್ಲಾ ವಿವಿ, ತನ್ನ ಎರಡನೇ ಪಂದ್ಯದಲ್ಲಿ ಕಾನ್ಪುರದ ಸಿಎಸ್‌ಜೆಎಂಗೆ 17-10ರಿಂದ ಶರಣಾಗುವ ಮೂಲಕ ಸತತ ಎರಡನೇ ಸೋಲನನುಭವಿಸಿತು.
ಮಂಗಳೂರು ವಿವಿಗೆ 2ನೇ ಜಯ
ಇಂದು ರಾತ್ರಿ ನಡೆದ ಬಿ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಮಂಗಳೂರು ವಿವಿ, ಛತ್ತೀಸಗಢದ ಹೇಮ್‌ಚಂದ್ ಯಾದವ್ ವಿವಿಯನ್ನು 22-14 ಅಂತರದಿಂದ ಸೋಲಿಸಿ ಸತತ ಎರಡನೇ ಗೆಲುವು ದಾಖಲಿಸಿತು.


