ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ಸಿಗರಿಗೆ ಬಡ್ಡಿ ಸಮೇತ ಉತ್ತರ: ಬಿ.ವೈ.ವಿಜಯೇಂದ್ರ

ಉಡುಪಿ, ಎ.10: ರಾಜ್ಯದಲ್ಲಿ ಹಿಟ್ಲರ್ ಸರಕಾರ ಆಡಳಿತ ನಡೆಸುತ್ತಿದೆ. 2028ರಲ್ಲಿ ಅಥವಾ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮುಂದೆ ಇರುವ ಸವಾಲು ಮತ್ತು ಗುರಿಯಾಗಿದೆ. ಇಂದು ಹಿಂದು ಕಾರ್ಯಕರ್ತರ ಮೇಲೆ ದಬ್ಬಾ ಳಿಕೆ ಮಾಡುವ ಕಾಂಗ್ರೆಸ್ ಪುಡಾರಿಗಳಿಗೆ ಬಡ್ಡಿ ಸಮೇತ ಉತ್ತರ ಕೊಡುವ ಕಾಲ ಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರಕಾರದ ಬೆಲೆ ಏರಿಕೆ, ಮುಸ್ಲಿಂ ಓಲೈಕ್, ದಲಿತರ ಹಣ ಲೂಟಿ ವಿರುದ್ಧ ಬಿಜೆಪಿ ವತಿಯಿಂದ ಉಡುಪಿ ಕಡಿಯಾಳಿಯ ಬಿಜೆಪಿ ಕಚೇರಿ ಸಮೀಪ ಗುರುವಾರ ಹಮ್ಮಿಕೊಳ್ಳಲಾಗಿರುವ ಜನಾಕ್ರೋಶ ಯಾತ್ರೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ರಾಜ್ಯದಲ್ಲಿರುವುದು ಜನಪ್ರಿಯ ಸರಕಾರ ಅಲ್ಲ, ಜಾಹೀರಾತು ಸರಕಾರ. ಬಡವರ ಪರ ಅಲ್ಲ, ಬೆಲೆ ಏರಿಕೆ ಮೂಲಕ ಬಡವರ ರಕ್ತ ಹೀರುವ ಸರಕಾರ. ಈ ಭ್ರಷ್ಟ ಸರಕಾರದಿಂದ ಅಭಿವೃದ್ಧಿ ಶೂನ್ಯ. ಅಹಿಂದ ಹೆಸರಿ ನಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಸರಕಾರ, ಹಿಂದುಳಿದ ವರ್ಗವನ್ನು ಸಂಪೂರ್ಣವಾಗಿ ಕಡೆಗಣಿ ಸಿದೆ ಎಂದು ಅವರು ಆರೋಪಿಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಮುಂದಿನ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಕಾಂಗ್ರೆಸ್‌ಗೆ ಸ್ಪಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಇಷ್ಟಾಚಾರ ಮತ್ತು ಭ್ರಷ್ಟಾಚಾರ ಮಾಡುತ್ತಿದೆ. ಪರಿಶಿಷ್ಟ ಜಾತಿ ಪಂಗಡಕ್ಕೆ ಮೀಸಲಿಟ್ಟ ಹಣ ದುರ್ಬಳಕೆ ಮಾಡಿದ್ದಾರೆ ಎಂದು ದೂರಿದರು.
ಮಾಜಿ ಸಚಿವ ಶ್ರೀರಾಮುಲು, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿದರು. ಬಿಜೆಪಿ ಮುಖಂಡರಾದ ಮಂಗಳೂರು ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಸುನೀಲ್ ಕುಮಾರ್, ಕಿರಣ್ ಕೊಡ್ಗಿ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿ ಕುಮಾರ್, ಕಿಶೋರ್ ಕುಮಾರ್, ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಪ್ರಭಾಕರ ಪೂಜಾರಿ, ಶಿಲ್ಪಾ ಜಿ.ಸುವರ್ಣ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು. ರೇಶ್ಮಾ ಉದಯ ಶೆಟ್ಟಿ ವಂದಿಸಿದರು. ಇದಕ್ಕೂ ಮುನ್ನಾ ಉಡುಪಿ ನಗರದ ಕಲ್ಸಂಕ ಸರ್ಕಲ್‌ನಿಂದ ಬಿಜೆಪಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಯಿತು. ಎತ್ತಿಗಾಡಿಯಲ್ಲಿ ಬಿಜೆಪಿ ಮುಖಂಡರು ಸಾಗಿ ಬಂದರು.