ಕಾರ್ಕಳ: ಸರಕಾರಿ ಆದೇಶ ವಿರುದ್ಧ ಬೀಡಿಕಾರ್ಮಿಕರಿಂದ ಪ್ರತಿಭಟನೆ

Update: 2025-04-11 20:58 IST
ಕಾರ್ಕಳ: ಸರಕಾರಿ ಆದೇಶ ವಿರುದ್ಧ ಬೀಡಿಕಾರ್ಮಿಕರಿಂದ ಪ್ರತಿಭಟನೆ
  • whatsapp icon

ಕಾರ್ಕಳ, ಎ.11: ಬೀಡಿ ಕಾರ್ಮಿಕ ಕನಿಷ್ಟ ಕೂಲಿ, ತುಟ್ಟಿಭತ್ಯೆ ಕಡಿತಗೊಳಿಸಿದ ಕರ್ನಾಟಕ ಸರಕಾರದ ಆದೇಶದ ವಾಪಸಾತಿಗೆ ಒತ್ತಾಯಿಸಿ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘ ಸಿಐಟಿಯು ನೇತೃತ್ವದಲ್ಲಿ ಇಂದು ಕಾರ್ಕಳ ತಾಲೂಕು ಕಛೇರಿ ಮುಂದೆ ಆದೇಶದ ಪ್ರತಿ ಸುಟ್ಟು ಪ್ರತಿಭಟನೆ ನಡೆಸಲಾಯಿತು.

ಬೀಡಿ ಕಾರ್ಮಿಕರ ತುಟ್ಟಿಭತ್ಯೆ, ನಿಗದಿತ ಕನಿಷ್ಠ ವೇತನ ಪಾವತಿಸದೆ ದುಡಿದ ಕಾರ್ಮಿಕರಿಗೆ ವೇತನ ಬಾಕಿ ಮಾಡಿದ ಬೀಡಿ ಮಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ಕಾರ್ಮಿಕರ ಹಿತರಕ್ಷಣೆ ಮಾಡುವಂತೆ ಹಾಗೂ ರಾಜ್ಯ ಸರಕಾರದ 2018ರ ಕನಿಷ್ಟ ವೇತನ ನಿಗದಿ ಆದೇಶದಂತೆ ಬೀಡಿ ಮಾಲಕರು ವೇತನ ನೀಡದೆ, ಬೀಡಿ ಕಾರ್ಮಿಕರಿಗೆ 2015ರಿಂದ ಡಿ.ಎ. ಹಾಗೂ ವೇತನ ಕೊಡಿಸಿ ಬೀಡಿ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಲಾಗಿತ್ತು ಎಂದು ಪ್ರತಿಭಟನಕಾರರು ತಿಳಿಸಿದರು.

ಆದರೆ ಕರ್ನಾಟಕ ಸರಕಾರ ಕಾರ್ಮಿಕರ ವಿರುದ್ಧವಾಗಿ, ಶೋಷಕ ಮಾಲಕರ ಪರವಾಗಿ ಈಗ ಕಾನೂನು ಬದ್ಧವಾಗಿ ನೀಡಬೇಕಾಗಿದ್ದ ವೇತನವನ್ನು ಬೀಡಿ ಮಾಲಕರು ಕಾರ್ಮಿಕರಿಗೆ ವಂಚಿಸಲು ಅನುಕೂಲ ಆಗುವಂತೆ 2018 ರಲ್ಲಿ ಅಂದಿನ ತಮ್ಮದೇ ಸರಕಾರ ಮಾಡಿದ ಆದೇಶವನ್ನು ಇಂದಿನ ಸರಕಾರ ಹಿಂಪಡೆದು ಹೊಸ ಕನಿಷ್ಟ ವೇತನವನ್ನು ಮಾಲಕರಿಗೆ ಬೇಕಾದಂತೆ ನಿಗದಿ ಪಡಿಸಿ ಕಳೆದ ಮಾ. 20ರಂದು ಹೊಸ ಆದೇಶ ಹೊರಡಿಸಿರುವುದು ಖಂಡನೀಯ ಎಂದು ಅವರು ಹೇಳಿದರು.

ಬೇಡಿಕೆಗಳು: ಸರಕಾರ ಕಳೆದ ತಿಂಗಳು ಹೊರಡಿಸಿದ ಆದೇಶವನ್ನು ಹಿಂಪಡೆದು ಬೀಡಿ ಕಾರ್ಮಿಕರ ಹಿತದೃಷ್ಟಿಯಿಂದ ಪ್ರತಿ 1,000 ಬೀಡಿಗೆ 395 ರೂ. ಕನಿಷ್ಟ ವೇತನ ನಿಗದಿ ಪಡಿಸಿ ಹೊಸ ಆದೇಶ ಮಾಡಬೇಕು.2025 ಮಾ.20ರ ಕಾರ್ಮಿಕ ವಿರೋಧಿ ಆದೇಶವನ್ನು ಹಿಂಪಡೆದು ಕಾರ್ಮಿಕರ ಈ ಹಿಂದಿನ ಆದೇಶವನ್ನು ಊರ್ಜಿತದಲ್ಲಿಟ್ಟು, ಆದೇಶ ನೀಡಬೇಕು.

ಬೀಡಿ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಮೂಲಕ ಸಿಗಬೇಕಾದ ಆರೋಗ್ಯ ಸಹಾಯ, ಮನೆ ಸಹಾಯ ಹಾಗೂ ವಿದ್ಯಾರ್ಥಿವೇತನ ನಿರಂತರ ಸಿಗುವಂತೆ ವ್ಯವಸ್ಥೆ ಮಾಡಬೇಕು. ಜಿಎಸ್‌ಟಿ ರೂಪದಲ್ಲಿ ಸಂಗ್ರಹವಾಗುವ ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಯ ಪಾಲಿನ ಸೆಸ್ಸಿನ ಪಾಲನ್ನು ತಕ್ಷಣ ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಗೆ ನೀಡಿ ಕಾರ್ಮಿಕರಿಗೆ ಸವಲತ್ತು ಒದಗಿಸಬೇಕು. ಕೇಂದ್ರ ಸರಕಾರಕ್ಕೆ ಈ ಬಗ್ಗೆ ಒತ್ತಡ ಹೇರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ತಹಶೀಲ್ದಾರರ ಮುಖಾಂತರ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ನೀಡಲಾಯಿತು.

ಪ್ರತಿಭಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಫೆಡರೇಷನ್ ಕಾರ್ಯದರ್ಶಿ ಉಮೇಶ್ ಕುಂದರ್, ಉಪಾಧ್ಯಕ್ಷ ರಾದ ಬಲ್ಕೀಸ್, ಬೀಡಿ ಟೋಬ್ಯಾಕೊ ಲೇಬರ್ ಯೂನಿಯನ್ ಅಧ್ಯಕ್ಷ ರಾದ ನಳಿನಿ ಎಸ್., ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಸುನೀತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್, ಕೋಶಾಧಿಕಾರಿ ಸುಮತಿ ಸಮಿತಿ ಸದಸ್ಯರಾದ ಶಕುಂತಲಾ, ಪ್ರತಿಮಾ,ಸುಮಿತ್ರಾ, ಪುಷ್ಪ ಉಪಸ್ಥಿತರಿದ್ದರು.





Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News