ಬಿಜೆಪಿಯ ಜನಾಕ್ರೋಶ ಯಾತ್ರೆ ಕೇಂದ್ರ ಸರಕಾರದ ವಿರುದ್ಧ: ಕೆಪಿಸಿಸಿ ಮಹಿಳಾಧ್ಯಕ್ಷೆ ಸೌಮ್ಯ ರೆಡ್ಡಿ ವ್ಯಂಗ್ಯ

ಉಡುಪಿ, ಎ.11: ಕೇಂದ್ರ ಸರಕಾರ ಇತ್ತೀಚೆಗೆ ಅಡುಗೆ ಅನಿಲ ದರವನ್ನು ಹಠಾತ್ತನೆ 50ರೂ. ಹಾಗೂ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಎರಡು ರೂ. ಹೆಚ್ಚಿಸಿದೆ. ಇದರಿಂದ ಜನಸಾಮಾನ್ಯರಿಗೆ ಜೀವನ ನಡೆಸಲಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ನಮ್ಮ ಬಿಜೆಪಿ ಸ್ನೇಹಿತರು ರಾಜ್ಯಾದ್ಯಂತ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಕೇಂದ್ರ ಸರಕಾರದ ವಿರುದ್ಧವೇ ಇರಬೇಕು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ವ್ಯಂಗ್ಯ ವಾಡಿದ್ದಾರೆ.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಇಂದು ನಡೆದ ಕೇಂದ್ರ ಸರಕಾರದ ಬೆಲೆ ಏರಿಕೆ ವಿರುದ್ಧದ ಮಹಿಳಾ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡು ತಿದ್ದರು. ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಬಾಗವಹಿಸಿದ್ದು ಸಿಲಿಂಡರ್‌ನ್ನು ತಲೆಯ ಮೇಲೆ ಹೊತ್ತುಕೊಂಡು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಡೆ ಕಾರ್ಪೋರೇಟ್ ಪರವಾದ ನೀತಿಯನ್ನು ಅನುಸರಿಸುವ ಬಿಜೆಪಿ, ದಿನಬಳಕೆಯ ಅಗತ್ಯ ವಸ್ತು ಗಳ ಬೆಲೆಯನ್ನು ಏರಿಸುವ ಮೂಲಕ ಜನಸಾಮಾನ್ಯರ ವಿರೋಧಿ ನೀತಿಯನ್ನು ಜಾರಿಗೊಳಿಸುತ್ತಿದೆ. ಇದರೊಂದಿಗೆ ಜಾತಿ-ಧರ್ಮದ ಆಧಾರದಲ್ಲಿ ಇಡೀ ಸಮಾಜವನ್ನು ಒಡೆಯುವ ಕೆಲಸದಲ್ಲಿ ಅದು ಮಗ್ನವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ, ಕೇಂದ್ರ ಸರಕಾರದ ವಿರುದ್ಧ ಹಾಗೂ ಶೋಭಾ ಮುಂತಾದ ಬಿಜೆಪಿಯ ನಾಯಕಿಯರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ನಾಯಕರಾದ ಎಂ.ಎ.ಗಫೂರ್, ಕಿಶನ್ ಹೆಗ್ಡೆ ಕೊಳ್ಕೆ ಬೈಲ್, ರಮೇಶ್ ಕಾಂಚನ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಗೀತಾ ವಾಗ್ಳೆ, ಜ್ಯೋತಿ ಹೆಬ್ಬಾರ್, ಡಾ.ಸುನೀತಾ ಶೆಟ್ಟಿ, ವರೋನಿಕಾ ಕರ್ನೇಲಿಯೊ ಮುಂತಾದವರು ಉಪಸ್ಥಿತರಿದ್ದರು.
