ಉಡುಪಿ: ನೂತನ ಉಪನ್ಯಾಯಾಲಯ ಸಂಕೀರ್ಣಕ್ಕೆ ಶಿಲಾನ್ಯಾಸ

ಉಡುಪಿ: ಸುಮಾರು 15.14 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಉಡುಪಿ ನ್ಯಾಯಾಲ ಯದ ನೂತನ ಉಪ ನ್ಯಾಯಾಲಯ ಸಂಕೀರ್ಣಕ್ಕೆ ಇಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯ ಮೂರ್ತಿಗಳೂ, ಉಡುಪಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರೂ ಆದ ಜಸ್ಟೀಸ್ ಇ.ಎಸ್.ಇಂದಿರೇಶ್ ಶಿಲಾನ್ಯಾಸ ನೆರವೇರಿಸಿದರು.
ಉಡುಪಿ ವಕೀಲರ ಸಂಘದ ವತಿಯಿಂದ ಆಯೋಜಿತವಾದ ಕಾರ್ಯಕ್ರಮ ದಲ್ಲಿ ಹೊಸ ಕಟ್ಟಡದ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಇಂದಿರೇಶ್, ಕಕ್ಷಿದಾರರ ಭೇಟಿಯೂ ಸೇರಿದಂತೆ ಇಂದು ವಕೀಲರಿಗೂ ಸುಸಜ್ಜಿತ ಭವನದ ಅಗತ್ಯವಿದೆ ಎಂದರಲ್ಲದೇ, ಗುಣಮಟ್ಟದ ಕಾಮಗಾರಿ ನಡೆಯು ವಂತೆ ನೋಡಿಕೊಳ್ಳಬೇಕು ಎಂದರು.
ಈ ಕಟ್ಟಡದಲ್ಲಿ ವಕೀಲರಿಗೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ, ಸುಸಜ್ಜಿತವಾದ ಗ್ರಂಥಾಲಯ ವನ್ನು ತೆರೆಯಬೇಕು. ವಕೀಲರ ಅಧ್ಯಯನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಇಲ್ಲಿರಬೇಕು. ಅದೇ ರೀತಿ ಇಂದಿನ ದಿನಗಳಲ್ಲಿ ಅಗತ್ಯವಾದ ವೀಡಿಯೋ ಕಾನ್ಫರೆನ್ಸ್ ರೂಮ್ ಸಹ ಇದರಲ್ಲಿರಬೇಕು ಎಂದರು.
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಮೂರು ಮಹಡಿಯ ಈ ಕಟ್ಟಡದ ಮೊದಲ ಹಂತದ ಕಾಮಗಾರಿಗೆ ಈಗಾಗಲೇ 15.14 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಎರಡನೇ ಹಂತದ ಕಾಮಗಾರಿಗೆ ಈಗಲೇ ನೀಲ ನಕ್ಷೆಯೊಂದಿಗೆ ಅಂದಾಜು ಪಟ್ಟಿ ತಯಾರಿಸುವ ಕೆಲಸ ನಡೆದಿದ್ದು, ಇದಕ್ಕೂ ಅನುದಾನವನ್ನೂ ಬಿಡುಗಡೆ ಗೊಳಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣವರ್, ಲೋಕೋಪಯೋಗಿ ಇಲಾಖೆಯ ಎಇಇ ಮಂಜುನಾಥ್ ಹಾಗೂ ಇತರರು ಉಪಸ್ಥಿತರಿದ್ದರು.