ಹೆಬ್ರಿ: ಗಾಳಿ-ಮಳೆಯಿಂದ ತೋಟಗಾರಿಕಾ ಬೆಳೆಗೆ ಭಾರೀ ಹಾನಿ

ಉಡುಪಿ, ಎ.16: ಕಳೆದ ಸೋಮವಾರ ಸಂಜೆ ಬೀಸಿದ ಸುಂಟರಗಾಳಿಗೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಉಂಟಾಗಿರುವ ಹಾನಿಯ ವಿವರಗಳು ಇನ್ನೂ ಮಣಿಪಾಲದಲ್ಲಿರುವ ಜಿಲ್ಲಾ ವಿಕೋಪ ನಿಯಂತ್ರಣ ಕೇಂದ್ರಕ್ಕೆ ಬರುತಿದ್ದು, ಉಡುಪಿ ನಗರಸಭಾ ವ್ಯಾಪ್ತಿಯ ಬಡಾನಿಡಿಯೂರು ಗ್ರಾಮ ಗರಡಿಮಜಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣೆ ಹಾರಿಹೋಗಿರುವ ಮಾಹಿತಿ ಬಂದಿದೆ.
ಅದೇ ರೀತಿ ಹೆಬ್ರಿ ತಾಲೂಕಿನ ನಾನಾ ಕಡೆಗಳಲ್ಲಿ ಅಪಾರ ಪ್ರಮಾಣದ ತೋಟಗಾರಿಕಾ ಬೆಳೆಗಳಿಗೆ ಹಾನಿಯುಂಟಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಅಡಿಕೆ, ತೆಂಗು, ಬಾಳೆ ಗಿಡಗಳು ಬಿರುಗಾಳಿಗೆ ಧರಾ ಶಾಯಿಯಾಗಿರುವ ಮಾಹಿತಿ ಬಂದಿದೆ. ಈವರೆಗೆ ಬಂದಿರುವ ಮಾಹಿತಿಯಂತೆ ಪಡುಕುಡೂರಿನ ಕೃಷ್ಣ ಬಿ.ಶೆಟ್ಟಿ, ಜಗದೀಶ್ ಹೆಗ್ಡೆ, ಲಕ್ಷ್ಮೀ ಶೆಟ್ಟಿ, ಶಿವಪುರದ ರಾಧಾಕೃಷ್ಣ ಪುತ್ತಿ ಇವರ ತೋಟಗಾರಿಕಾ ಬೆಳೆ ನಾಶವಾಗಿದೆ. ಇದರಿಂದ ಮೂರು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿರುವ ಅಂದಾಜು ಮಾಡಲಾಗಿದೆ.
ಅಡಿಕೆ ಮರ ಬಿದ್ದು ಗಾಯ: ಕಾಪು ತಾಲೂಕಿನ ಮೂಡಬೆಟ್ಟು ಗ್ರಾಮದಲ್ಲಿ ಲತಾ ಎಂಬವರ ಮೇಲೆ ಅಡಿಕೆ ಮರ ಬಿದ್ದು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಸೋಮವಾರ ಸಂಜೆ ಬೀಸಿದ ಬಿರುಗಾಳಿಗೆ ಉಡುಪಿ ತಾಲೂಕಿನ 11, ಹೆಬ್ರಿ ತಾಲೂಕಿನ 9 ಹಾಗೂ ಕಾಪು ತಾಲೂಕಿನ ಮೂರು ಸೇರಿದಂತೆ ಜಿಲ್ಲೆಯ ಇನ್ನೂ 23 ಮನೆಗಳಿಗೆ ಹಾನಿಯುಂಟಾಗಿರುವ ಮಾಹಿತಿ ಕಂಟ್ರೋಲ್ ರೂಮ್‌ಗೆ ಬಂದಿವೆ. ಇದರಿಂದ ಐದು ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಹಾನಿ ಉಂಟಾಗಿರು ವುದಾಗಿ ಅಂದಾಜಿಸಲಾಗಿದೆ.
ಹೆಬ್ರಿ ಶಿವಪುರದ ರಾಜೀವ್ ಶೆಟ್ಟಿ ಎಂಬವರ ಮನೆಗೆ ಸಂಪೂರ್ಣ ಹಾನಿಯಾಗಿದ್ದು, ಎರಡು ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಅದೇ ಗ್ರಾಮದ ತೇಜ ಶೆಟ್ಟಿ ಹಾಗೂ ರಾಜೀವ್ ಭಟ್ ಅವರ ಮನೆಗೂ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದೆ.
ಉಡುಪಿ ತಾಲೂಕಿನಲ್ಲಿ ಮರ್ಣೆ, ಹೆರ್ಗಾ, ಕಡೆಕಾರು, ಬೊಮ್ಮರಬೆಟ್ಟು, ಬಡಗುಬೆಟ್ಟು, ಶಿವಳ್ಳಿ , ಹೆಬ್ರಿ ತಾಲೂಕಿನ ಶಿವಪುರ, ಮುದ್ರಾಡಿ ಗ್ರಾಮಗಳಲ್ಲಿ ಹಾಗೂ ಕಾಪು ತಾಲೂಕಿನ ಪಡು, ಪಾಂಗಾಳ, ಕುರ್ಕಾಲು ಗಳಲ್ಲಿ ಅನೇಕ ಮನೆಗಳಿಗೆ ಹಾನಿಯುಂಟಾಗಿವೆ.
ಮೆಸ್ಕಾಂಗೂ 50 ಲಕ್ಷಕ್ಕೂ ಅಧಿಕ ನಷ್ಟ: ಸೋಮವಾರ ಬೀಸಿದ ಬಿರುಗಾಳಿಗೆ ಮೆಸ್ಕಾಂ ದೊಡ್ಡ ಪ್ರಮಾ ಣದ ನಷ್ಟ ಅನುಭವಿಸಿದೆ. ಅಂದು ಒಂದೇ ದಿನ ಮೆಸ್ಕಾಂಗೆ 55 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಅಧಿಕಾರಿಯೊಬ್ಬಬರು ಅಂದಾಜಿಸಿದ್ದಾರೆ.
ಒಂದೇ ದಿನದಲ್ಲಿ ಜಿಲ್ಲೆಯಾದ್ಯಂತ 300ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದರೆ, ಸುಮಾರು ನಾಲ್ಕೂವರೆ ಕಿ.ಮೀ. ಉದ್ದದ ವಿದ್ಯುತ್ ತಂತಿ ತುಂಡಾಗಿವೆ. ಇನ್ನೂ ಟ್ರಾನ್ಸ್ ಫಾರ್ಮರ್ ಸೇರಿದಂತೆ ಮೆಸ್ಕಾಂಗಾದ ನಷ್ಟದ ಪ್ರಮಾಣ 50 ಲಕ್ಷ ರೂ.ಗಳಿಗೂ ಮೀರಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.