ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತರಿಂದ ಪವಿತ್ರ ಗುರುವಾರದ ಆಚರಣೆ

Update: 2025-04-17 19:59 IST
ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತರಿಂದ ಪವಿತ್ರ ಗುರುವಾರದ ಆಚರಣೆ
  • whatsapp icon

ಉಡುಪಿ, ಎ.17: ಯೇಸು ಕ್ರಿಸ್ತರು ತಮ್ಮ ಶಿಷ್ಯರೊಂದಿಗೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೈಸ್ತ ಧರ್ಮಸಭೆಯ ಉಗಮದ ಸ್ಮರಣಾರ್ಥ ಪವಿತ್ರ ಗುರುವಾರದ ಆಚರಣೆಯಲ್ಲಿ ಜಿಲ್ಲೆಯಾದ್ಯಂತ ಕ್ರೈಸ್ತರು ಶ್ರದ್ದೆ ಹಾಗೂ ಭಕ್ತಿಯಿಂದ ಆಚರಿಸಿದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್ ಚರ್ಚ್‌ನಲ್ಲಿ ಧರ್ಮ ಪಾಂತ್ಯದ ಪ್ರಧಾನ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಪವಿತ್ರ ಗುರುವಾರದಂದು ಯೇಸು 12 ಮಂದಿ ಶಿಷ್ಯರೊಂದಿಗೆ ಸೇರಿ ಕೊನೆಯ ಭೋಜನ ಮಾಡಿದ್ದರು. ಈ ವೇಳೆ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ಶಿಷ್ಯರಿಗೆ ದೀನತೆಯ ಹಾಗೂ ಸೇವೆಯ ಸಂದೇಶ ಸಾರಿದ್ದರು. ಅದರ ಧ್ಯೋತಕವಾಗಿ ಬಲಿಪೂಜೆಯ ವೇಳೆ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ 12 ಮಂದಿ ಪ್ರೇಷಿತರ ಪಾದಗಳನ್ನು ತೊಳೆಯುವ ಮೂಲಕ ಏಸುಕ್ರಿಸ್ತರು ಸಾರಿದ ದೀನತೆ ಹಾಗೂ ಪ್ರೀತಿಯ ಸಂದೇಶವನ್ನು ನೀಡಿದರು.

ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯ ಧರ್ಮಗುರು ವಂ.ಪ್ರದೀಪ್ ಕಾರ್ಡೊಜ, ವಂ.ಡಾ.ಜೆನ್ಸಿಲ್ ಆಲ್ವಾ, ಧರ್ಮ ಪ್ರಾಂತ್ಯದ ಕುಲಪತಿ ವಂ. ಸ್ಟೀಫನ್ ಡಿಸೋಜ, ಕಟಪಾಡಿ ಹೋಲಿ ಕ್ರಾಸ್ ಸಂಸ್ಥೆಯ ನಿರ್ದೇಶಕ ವಂ.ರೋನ್ಸನ್ ಡಿಸೋಜ, ಪಿಲಾರ್ ಫಾದರ್ಸ್ ಸಂಸ್ಥೆಯ ನಿರ್ದೇಶಕ ವಂ.ಮನೋಜ್ ಫುರ್ಟಾಡೊ ಉಪಸ್ಥಿತರಿದ್ದರು.

ವಿವಿಧ ಚರ್ಚ್‌ಗಳಲ್ಲಿ ಆಚರಣೆ: ಪವಿತ್ರ ಗುರುವಾರದ ಅಂಗವಾಗಿ ವಿವಿಧ ಚರ್ಚ್‌ಗಳಲ್ಲಿ ಪರಮ ಪ್ರಸಾದ ಸಂಸ್ಕಾರ, ಗುರುದೀಕ್ಷೆಯ ಸಂಸ್ಕಾರ, ಸೇವೆಯ ಸಂಸ್ಕಾರದ ಸ್ಮರಣೆಯೊಂದಿಗೆ ವಿಶೇಷ ಪ್ರಾರ್ಥನೆ, ಬಲಿಪೂಜೆ, ಆರಾಧನೆಗಳು ಜರಗಿದವು. ಶುಕ್ರವಾರ ಯೇಸುವನ್ನು ಶಿಲುಬೆಗೇರಿಸಿದ ದಿನವಾವಾಗಿದ್ದು, ಕ್ರೈಸ್ತರು ಶುಭ ಶುಕ್ರವಾರ(ಗುಡ್ ಫ್ರೈಡೆ)ವಾಗಿ ಆಚರಿಸಲಿ ದ್ದಾರೆ. ಅಂದು ಧ್ಯಾನ, ಉಪವಾಸ ನಡೆಯಲಿದೆ. ಯೇಸುವಿನ ಶಿಲುಬೆಯ ಹಾದಿಯನ್ನು ನೆರವೇರಿಸಲಾಗುತ್ತದೆ.

ಜಿಲ್ಲೆಯ ವಿವಿಧ ಚರ್ಚುಗಳಲ್ಲಿ ಆಯಾ ಚರ್ಚುಗಳ ಧರ್ಮಗುರುಗಳ ನೇತೃತ್ವದಲ್ಲಿ ಪವಿತ್ರ ಗುರುವಾರದ ಬಲಿಪೂಜೆ ಹಾಗೂ 12 ಮಂದಿ ಪ್ರೇಷಿತರ ಪಾದಗಳನ್ನು ತೊಳೆಯುವ ವಿಧಿ ವಿಧಾನಗಳು ಜರಗಿದವು.

ಉಡುಪಿ ಶೋಕಮಾತಾ ಚರ್ಚಿನಲ್ಲಿ ಧರ್ಮಗುರುಗಳಾದ ವಂ.ಚಾರ್ಲ್ಸ್ ಮಿನೇಜಸ್, ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ವಂ.ಡೆನಿಸ್ ಡೆಸಾ, ಕುಂದಾಪುರ ಹೋಲಿ ರೋಸರಿ ಚರ್ಚಿನಲ್ಲಿ ವಂ.ಪಾವ್ಲ್ ರೇಗೊ, ಶಿರ್ವ ಆರೋಗ್ಯ ಮಾತಾ ಚರ್ಚಿನಲ್ಲಿ ವಂ.ಡಾ.ಲೆಸ್ಲಿ ಡಿಸೋಜ, ಕಾರ್ಕಳ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ವಂ.ಆಲ್ಬನ್ ಡಿಸೋಜ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.

‘ಪವಿತ್ರ ಗುರುವಾರ, ಪ್ರಭುವಿನ ಭೋಜನ, ಸೇವೆ ಮತ್ತು ಪ್ರೀತಿಯ ಸಂಕೇತವಾಗಿ ನೆನಪಿಸಿಕೊಳ್ಳಲಾಗು ತ್ತದೆ. ಪವಿತ್ರ ಗುರುವಾರ ಕೇವಲ ಆರಾಧನೆಯ ದಿನವಲ್ಲ. ಇದು ಮಾನವೀಯ ಮೌಲ್ಯಗಳನ್ನು, ಬಾಳಿನಲ್ಲಿ ಜೀವಿಸುವ ವಿಶೇಷ ಕ್ಷಣವಾಗಿದೆ. ಯೇಸು ನೀಡಿದ ಆಜ್ಞೆಯಂತೆ: ನಾನು ನಿಮ್ಮನ್ನು ಪ್ರೀತಿಸಿ ದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಿ ಎಂಬಂತೆ ನಾವೂ ನಮ್ಮನ್ನು ದ್ವೇಷಿಸುವವರನ್ನು, ಹಿಂಸಿಸುವವರನ್ನು, ವೈರಿಗಳನ್ನು, ಅನ್ಯಾಯವಾಗಿ ಇಲ್ಲಸಲ್ಲದ್ದನ್ನು ನಮ್ಮ ಮೇಲೆ ಹೊರಿಸುವವರನ್ನು ಪ್ರೀತಿಸಬೇಕು’

-ಅತಿ ವಂ.ಜೆರಾಲ್ಡ್ ಲೋಬೊ, ಬಿಷಪ್ ಉಡುಪಿ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News