ಸರಕಾರದ ರಕ್ಷಣೆಗೆ ಜನಗಣತಿ ವಿಚಾರ ಮುನ್ನೆಲೆಗೆ ತಂದ ಸಿಎಂ ಸಿದ್ದರಾಮಯ್ಯ: ಸಂಸದ ಕೋಟ ಆರೋಪ

ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಎ.17: ಮುಖ್ಯಮಂತ್ರಿಯಾಗಿ ತಮಗೆ ಬಂದಿರುವ ಗಂಡಾಂತರ ವನ್ನು ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಅವರು ಜನಗಣತಿ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಸರಕಾರ ಹಾಗೂ ತಮ್ಮ ರಕ್ಷಣೆ ಮಾಡಿಕೊಳ್ಳಲು ಅವರು ಈ ರೀತಿ ಮಾಡಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ಅವರು ಇಂದು ಸುದ್ದಿಗಾರ ರೊಂದಿಗೆ ಮಾತನಾಡಿದರು. ಸರಕಾರದ ಮೇಲೆ ಸಮಸ್ಯೆ ಬರುತ್ತೆ ಎಂದಾಗ ಜಾತಿಗಣತಿ ವಿಚಾರವನ್ನು ಮುಂದೆ ತಂದಿದ್ದಾರೆ. ಸರಕಾರದ ರಕ್ಷಣೆಗಾಗಿ ಅವರು ಹೀಗೆ ಮಾಡುತಿದ್ದಾರೆ. ಸರಕಾರ ಇದನ್ನು ಗುರಾಣಿಯಾಗಿ ಇಟ್ಟುಕೊಂಡಿದೆ ಎಂದವರು ಲೇವಡಿ ಮಾಡಿದರು.
ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯ ಕುರಿತು ಬಜೆಪಿ ಕಾದು ನೋಡುವ ತೀರ್ಮಾನ ಮಾಡಿದೆ. ಬಿಜೆಪಿ ಮುಖಂಡರು ಸಭೆ ಸೇರಿ ಮುಂದಿನ ನಿರ್ಧಾರ ತೆಗೆದು ಕೊಳ್ಳುತ್ತೇವೆ. ವರದಿ ಅಂಗೀಕಾರ, ಸ್ವೀಕಾರ, ಪ್ರಕಟಣೆ, ಬಿಡುಗಡೆ ವಿಚಾರದಲ್ಲಿ ಈ ಸರಕಾರ ಹಳಿ ತಪ್ಪಿದೆ. ಸರಕಾರ ಸಚಿವ ಸಂಪುಟದ ಸಭೆಯಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಕಾದು ನೋಡೋಣ ಎಂದರು.
ಈವರೆಗೆ ಬಂದಿರುವ ಮಾಹಿತಿಯಂತೆ ವರದಿಯಲ್ಲಿ ಅಲ್ಪಸಂಖ್ಯಾತರನ್ನು ಒಂದೇ ಜಾತಿ ಎಂದು ಪರಿಗಣಿ ಸಲಾಗಿದೆ. ಆದರೆ ಲಿಂಗಾಯಿತರು ಒಕ್ಕಲಿಗರನ್ನು ವಿಂಗಡಿಸಿ ಸಮಾಜ ಒಡೆಯಲಾಗಿದೆ. ವಿಶ್ವಕರ್ಮರು, ಈಡಿಗರು, ಬಲಿಜಿಗರು ನಾವು 30- 35 ಲಕ್ಷ ಇದ್ದೇವೆ ಎನ್ನುತ್ತಾರೆ. ಆದರೆ ಸರಕಾರ 11-12 ಲಕ್ಷ ಎನ್ನುತ್ತದೆ. ಹೀಗೆ ಎಲ್ಲಾ ಸಮಾಜದಲ್ಲೂ ಗೊಂದಲ ಉಂಟಾಗಿದೆ ಎಂದು ಟೀಕಿಸಿದರು.
ಬಹು ದೊಡ್ಡ ಸಂಖ್ಯೆಯಲ್ಲಿರುವ ಪ. ಜಾತಿ ಮತ್ತು ಪ. ಪಂಗಡದ ಮುಖಂಡರು ಜಾತಿ ಆಧಾರದಲ್ಲಿ ನಮ್ಮನ್ನು ವಿಭಜನೆ ಮಾಡಿದ್ದಾರೆ ಎನ್ನುತ್ತಾರೆ. ಅಲ್ಪಸಂಖ್ಯಾತರನ್ನು ಹೆಚ್ಚು ಎಂದು ತೋರಿಸುವ ತಂತ್ರ ಇದರಲ್ಲಿ ಕಾಣಿಸುತ್ತಿದೆ ಎಂದರು.
ಕ್ರಿಶ್ಚಿಯನ್‌ರಲ್ಲೂ ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ಬಲಿಜ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್ ಮುಂತಾದ ಪದಗಳನ್ನು ವರದಿಯಲ್ಲಿ ಬಳಸಲಾ ಗಿದೆ. ಇದರಿಂದ ಆಯಾ ಸಮುದಾಯಗಳು ನೋವು ವ್ಯಕ್ತಪಡಿಸುವೆ. ಆಯಾ ಸಮುದಾಯದ ಕ್ರಿಶ್ಚಿಯನ್ ಎಂದು ನಮೂದಿಸಲಾಗಿದೆ ಎಂದವರು ಹೇಳಿದರು.
ಸಿದ್ಧರಾಮಯ್ಯ ತಮಗೆ ಬಂದಿರುವ ಗಂಡಾಂತರ ತಪ್ಪಿಸಿಕೊಳ್ಳಲು ಜನಗಣತಿಯನ್ನು ಮುನ್ನಲೆಗೆ ತಂದಿ ದ್ದಾರೆ. ಸಿದ್ಧರಾಮಯ್ಯ ಅವರೇ ಕಾಂತರಾಜರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಇದಕ್ಕಾಗಿ ಹಣ ಬಿಡುಗಡೆ ಮಾಡಿದ್ದು ಸಹ ಸಿದ್ದರಾಮಯ್ಯರೇ. ಈಗ ತಮ್ಮ ರಕ್ಷಣೆ ಮಾಡಿಕೊಳ್ಳಲು ಇದನ್ನು ಗುರಾಣಿ ಯಾಗಿ ಇಟ್ಟುಕೊಂಡಿದ್ದಾರೆ. ಮತ್ತೊಂದು ಉಪಸಮಿತಿ ಮಾಡಿ ಮತ್ತಷ್ಟು ಕಾಲ ಮುಂದೂಡಬಹುದು ಎಂದರು.
ಸರಕಾರ ಇವತ್ತು ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕು. ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸುತ್ತಾ? ನಾವು ದುರ್ಬಲರ, ಹಿಂದುಳಿದ ವರ್ಗದವರ ಪರವಾಗಿ ನಿಲ್ಲುತ್ತೇವೆ. ಜಯಪ್ರಕಾಶ್ ಹೆಗ್ಡೆ ಹಿರಿಯರು, ವ್ಯಕ್ತಿಗತವಾಗಿ ನಾನು ಏನು ಹೇಳುವುದಿಲ್ಲ. ನಮ್ಮ ಸರಕಾರ ವರದಿ ಪರಿಶೀಲನೆ ಮಾಡಲು ಅವರನ್ನು ನೇಮಿಸಿತ್ತು ಎಂದು ಕೋಟ ಹೇಳಿದರು.
ವರದಿಯ ಲೋಪದೋಷಗಳಿಗೆ ಸರಕಾರವೇ ಉತ್ತರಿಸಬೇಕು. ಇವತ್ತು ಅಥವಾ ನಾಳೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಬಹುದು. ಸಮಿತಿ ಮಾಡಿ ಕೈ ತೊಳೆದುಕೊಳ್ಳಬಹುದು. ಆಡಳಿತಾತ್ಮಕ ಗದಾ ಪ್ರಹಾರ ತಪ್ಪಿಸಿಕೊಳ್ಳಲು ಈ ವಿಚಾರ ಪ್ರಸ್ತಾವಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷದೊಳಗಿನ ಒಪ್ಪಂದದ ವಿಚಾರ ಮರೆಮಾಚಲು ಮುನ್ನಲೆಗೆ ಬಂದಿದೆ. ಸರಕಾರ ತನ್ನ ರಕ್ಷಣೆಗೆ ಈ ವಿಚಾರವನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಸರಕಾರದ ವಿರುದ್ಧ ಕಿಡಿ ಕಾರಿದರು.