ಮಕ್ಕಳನ್ನು ಕ್ರಿಯಶ್ರೀಲರಾಗಲು ಚಟುವಟಿಕೆಗಳಲ್ಲಿ ತೊಡಗಿಸಿ: ಎಸ್ಸೈ ಪ್ರಸನ್ನ

Update: 2025-04-17 22:11 IST
ಮಕ್ಕಳನ್ನು ಕ್ರಿಯಶ್ರೀಲರಾಗಲು ಚಟುವಟಿಕೆಗಳಲ್ಲಿ ತೊಡಗಿಸಿ: ಎಸ್ಸೈ ಪ್ರಸನ್ನ
  • whatsapp icon

ಪಡುಬಿದ್ರೆ, ಎ.17: ಪಡುಬಿದ್ರೆ ಓಂಕಾರ್ ಕಲಾ ಸಂಗಮದ ವತಿಯಿಂದ 15 ದಿನಗಳ ಕಾಲ ಹಮ್ಮಿ ಕೊಳ್ಳಲಾಗಿರುವ ನಾಲ್ಕನೇ ವರ್ಷದ ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರವನ್ನು ಪಡುಬಿದ್ರೆ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಪಿ.ಎಸ್. ಎ.13ರಂದು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಬಾಲ್ಯದಲ್ಲಿಯೇ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಬೇಸಿಗೆ ಶಿಬಿರಗಳು ಪೂರಕವಾಗಿವೆ. ಮಕ್ಕಳನ್ನು ಸಮಾಧಾನ ಪಡಿಸಲು ಭಯ ಮೂಡಿಸುವ ಕಾರ್ಯ ಮಾಡಿದರೆ ಮಕ್ಕಳ ಮನಸ್ಸಿಗೆ ನೋವು ಉಂಟಾಗಿ, ಕ್ರಮೇಣ ಜೀವನದಲ್ಲಿ ಭಯ ಎದುರಿಸಲು ಅಶಕ್ತರಾಗುವ ಸಾಧ್ಯತೆ ಇದೆ. ಆದುದರಿಂದ ಮಕ್ಕಳನ್ನು ಸದಾ ಕ್ರಿಯಶ್ರೀಲರಾಗುವಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದರು.

ರಂಗಭೂಮಿ ಕಲಾವಿದ ರಾಮಾಂಜಿ ಉಡುಪಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆ ಶಿಬಿರ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಶಾಲೆಯಲ್ಲಿ ಕೇವಲ ಪಠ್ಯ ಪುಸ್ತಕಗಳ ವಿಚಾರ ತಿಳಿ ಯುವ ಮಕ್ಕಳಿಗೆ ಇಂತಹ ಶಿಬಿರಗಳು ಸೃಜನಾತ್ಮಕವಾಗಿ ಯೋಚಿಸಲು ಸಹಕಾರಿಯಾಗುತ್ತದೆ. ರಂಗ ಚಟುವಟಿಕೆಗಳು ಮಕ್ಕಳಲ್ಲಿ ಏಕಾಗ್ರತೆ, ಶಿಸ್ತು, ಸಮಾಜಮುಖಿ ಚಿಂತನೆ, ಭಾಷಾ ಪ್ರೇಮವನ್ನು ಬೆಳೆಸು ತ್ತದೆ. ತರಬೇತಿಯ ಸಂದರ್ಭದಲ್ಲಿ ತರಬೇತುದಾರರು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು, ಕಲಿಸಬೇಕು ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕೃತ ಪಡುಬಿದ್ರಿ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಪಿ.ಎಸ್. ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ರಜಾಮಜಾ ಶಿಬಿರದ ನಿರ್ದೇಶಕಿ ಗೀತಾ ಅರುಣ್ ವಹಿಸಿದ್ದರು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜಶ್ರೀ ಕಿಣಿ, ಪಡುಬಿದ್ರಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ಯಶೋಧಾ ಪಡುಬಿದ್ರೆ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಇದರ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ಸಂಗೀತ ಬಾಲಕಲಾವಿದೆ ಬೇಬಿ ಸಾಂಚಿ ಮುಖ್ಯ ಅತಿಥಿಗಳಾಗಿದ್ದರು.

ಸಂಸ್ಥೆಯ ಪಾಲುದಾರ ಉದಯ ಕುಮಾರ್ ಭಟ್, ಅರುಣ್ ಕುಮಾರ್, ಅದ್ವಿತ್ ಕುಮಾರ್ ಉಪಸ್ಥಿತರಿದ್ದರು. ಕಲಾವಿದ ಕಾರ್ತಿಕ್ ಎನ್.ಮುಲ್ಕಿ ಸ್ವಾಗತಿಸಿದರು. ಸಂತೋಷ್ ಪಡುಬಿದ್ರಿ ವಂದಿಸಿದರು. ದೀಪಾಶ್ರೀ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News