ಬೈಲೂರು: ಇಂದು ಚೈತನ್ಯ ಕಲಾವಿದರು ತಂಡದ 'ಅಷ್ಟಮಿ' ನಾಟಕದ ಶತ ಸಂಭ್ರಮ
ಕಾರ್ಕಳ: ಚೈತನ್ಯ ಕಲಾವಿದರು ಬೈಲೂರು ತಂಡದ 'ಅಷ್ಟಮಿ' ನಾಟಕದ ಶತ ಸಂಭ್ರಮ ಕಾರ್ಯಕ್ರಮವು ಎ.20ರಂದು ಸಂಜೆ 5ರಿಂದ 10ರವರೆಗೆ ಬೈಲೂರು ಬಸ್ ಸ್ಟ್ಯಾಂಡ್ ಹತ್ತಿರದ ಸೌಂದರ್ಯ ಕಾಂಪ್ಲೆಕ್ಸ್ ಬಳಿ ನೀರೆ ಕುದುರು ದರ್ಖಾಸು ದಿ| ಜಲಜಾ ಗೋವಿಂದ ವಾಗ್ಲೆ ವೇದಿಕೆಯಲ್ಲಿ ಜರುಗಲಿದೆ ಎಂದು ತಂಡದ ಪ್ರವರ್ತಕ ಪ್ರಸನ್ನ ಶೆಟ್ಟಿ ಬೈಲೂರು ತಿಳಿಸಿದ್ದಾರೆ.
ಎ.18ರಂದು ಕಾರ್ಕದ ಹೋಟೆಲ್ ಪ್ರಕಾಶ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ರಚನೆ, ನಿರ್ದೇಶನದಲ್ಲಿ ಇದು 10ನೇ ನಾಟಕವಾಗಿದ್ದು, ಅತೀ ಕಡಿಮೆ ಅವಧಿಯಲ್ಲಿ ಅಷ್ಟಮಿ ನಾಟಕ 100 ಪ್ರದರ್ಶನವನ್ನು ಪೂರೈಸಿದ್ದು, 115ನೇ ಪ್ರದರ್ಶನ ವರೆಗೂ ಬುಕ್ಕಿಂಗ್ ಪಡೆದುಕೊಂಡಿದೆ. ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು, ಮುಂಬೈಯಲ್ಲೂ ನಾಟಕ ಪ್ರದರ್ಶನಕ್ಕೆ ಬೇಡಿಕೆ ಬರುತ್ತಿದೆ ಎಂದರು.
ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ನಿಟ್ಟಿನಲ್ಲಿ 10 ವರ್ಷಗಳ ಹಿಂದೆ ಬೈಲೂರಿನಲ್ಲಿ ಚೈತನ್ಯ ಕಲಾವಿದರು ತಂಡ ರೂಪಿಸಲಾಯಿತು. ಈ ತಂಡದ ಮೂಲಕ ಈಗಾಗಲೆ ಒಂಭತ್ತು ನಾಟಕಗಳನ್ನು ಪ್ರದರ್ಶಿಸಿ ಜನರ ಪ್ರಶಂಸೆಗೆ ತಂಡವು ಪಾತ್ರವಾಗಿದೆ. ತಂಡದ 10ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಈ ವರ್ಷ ತಂಡದ ಸದಸ್ಯರ ಮೂಲಕ ತುಳುನಾಡಿನ ಜಾನಪದ ಹುಲಿವೇಷದ ಸುತ್ತ ಕಥೆ ಬರೆದು ಅಷ್ಟಮಿ ನಾಟಕ ಪ್ರದರ್ಶಿಸಲಾಗುತ್ತಿದೆ ಎಂದರು.
ಕಲಾವಿದರು ಮತ್ತು ತಂತ್ರಜ್ಞರನ್ನು ಕೂಡಿಕೊಂಡ 25ಕ್ಕೂ ಅಧಿಕ ಮಂದಿ ಸದಸ್ಯರ ತಂಡ ಇದಾಗಿದ್ದು ನಾಟಕದ ಯಶಸ್ಸಿನ ಮುಖ್ಯ ಭಾಗವಾಗಿದ್ದಾರೆ. ಉಡುಪಿ, ದ.ಕ. ಜಿಲ್ಲೆ ಸಹಿತ ಎಲ್ಲೆಡೆ ಉತ್ತಮ ಅಭಿಪ್ರಾಯ ಪಡೆದು ಈ ನಾಟಕವು ಶತ ಪ್ರದರ್ಶನ ಪೂರೈಸಿದೆ. ಈ ಸಂಭ್ರಮಾಚರಣೆಯನ್ನು ಬೈಲೂರಿನಲ್ಲಿ ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಪ್ರಯುಕ್ತ ಕೌಂಟರ್ ಕಾಮಿಡಿ, ನೃತ್ಯ ಸಿಂಚನ, ಸ್ವರ ಸಂಭ್ರಮ ಕಾರ್ಯಕ್ರಮದ ನಂತರ ಅಷ್ಟಮಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲಾ ಪೋಷಕರಾದ ಕೃಷ್ಣರಾಜ್ ಹೆಗ್ಡೆ, ದಿನೇಶ್ ಬನಾನ್ ನಕ್ರೆ. ಸುಮೀತ್ ಶೆಟ್ಟಿ, ಸದಾನಂದ ಸಾಲ್ಯಾನ್ ಉಪಸ್ಥಿತರಿದ್ದರು.