ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನದ ಆಶಯಕ್ಕೆ ವಿರುದ್ಧ: ಸುಧೀರ್ ಮರೋಳಿ

ಕುಂದಾಪುರ, ಎ.20: ವಕ್ಫ್ ತಿದ್ದುಪಡಿ ಕಾಯ್ದೆ ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಇದು ಬಂಡವಾಳಶಾಹಿಗಳ ಹಿತಕ್ಕಾಗಿ ಮತ್ತು ಅವರ ಅನುಕೂಲಕ್ಕಾಗಿ ಮಾಡಲಾದ ತಿದ್ದುಪಡಿಯಾಗಿದೆ. ಇದನ್ನು ಸಾಂವಿಧಾನಿಕವಾಗಿ ಒಪ್ಪಲು ಸಾಧ್ಯವಿಲ್ಲ ಎಂದು ವಕೀಲರು ಮತ್ತು ಎಪಿಸಿಆರ್ ಕರ್ನಾಟಕದ ರಾಜ್ಯಾಧ್ಯಕ್ಷ ಸುಧೀರ್ ಕುಮಾರ್ ಮರೋಳಿ ಹೇಳಿದ್ದಾರೆ.
ವಕ್ಫ್ ಉಳಿಸಿ-ಸಂವಿಧಾನ ರಕ್ಷಿಸಿ ಹೋರಾಟ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಕುಂದಾಪುರದ ಜಾಮಿಯಾ ಮಸೀದಿ ವಠಾರದಲ್ಲಿ ಶನಿವಾರ ಆಯೋಜಿಸಲಾದ ವಕ್ಫ್ ತಿದ್ದುಪಡಿ ಕಾಯ್ದೆಯ ಕುರಿತ ತಾಲೂಕು ಮಟ್ಟದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಈಗಾಗಲೇ ಕಾಯ್ದೆಗೆ ಸಂಬಂಧಪಟ್ಟಂತೆ ಭಾರತದ ಉಚ್ಚ ನ್ಯಾಯಾಲಯದಲ್ಲಿ ಚರ್ಚೆ ನಡೆಯುತ್ತಿರು ವುದರಿಂದ ಕಾಯ್ದೆಗೆ ತಡೆ ಬರುವ ಸಾಧ್ಯತೆ ಇದೆ. ಕಾಯ್ದೆ ಬಗ್ಗೆ ದೇಶ ಬಾಂಧವರಲ್ಲಿ ಹಲವಾರು ಸಂಶಯ ಗಳು ಮತ್ತು ತಪ್ಪುಕಲ್ಪನೆಗಳನ್ನು ಹರಡಿಸಲಾಗಿದ್ದಗು, ಅದನ್ನು ನಿವಾರಿಸುವ ಕೆಲಸ ನಡೆಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಮೌಲಾನ ಅಬ್ದುರೆಹ್ಮಾನ್ ರಝ್ವಿ ಕಲ್ಕಟ್ಟ, ಎಪಿಸಿಆರ್ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುಸೇನ್ ಕೋಡಿಬೇಂಗ್ರೆ, ಇದ್ರೀಸ್ ಹೊಡೆ ಮಾತನಾಡಿದರು.
ಒಕ್ಕೂಟದ ಜಿಲ್ಲಾ ಹಿರಿಯ ಉಪಾಧ್ಯಕ್ಷ ಬಿಎಸ್‌ಎಫ್ ಮುಹಮ್ಮದ್ ರಫೀಕ್, ಮಾಜಿ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೂಟ, ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಫರೀದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿ, ತಾಲೂಕಿನ ಮಸೀದಿ ಮದ್ರಸಾ ಮತ್ತು ಸಂಘ ಸಂಸ್ಥೆಗಳ ಹೊಣೆಗಾರರು ಉಪಸ್ಥಿತರಿದ್ದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಮೌಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಾರ್ಯ ದರ್ಶಿ ರಿಯಾಝ್ ಕೋಡಿ ಸ್ವಾಗತಿಸಿದರು. ತಾಲೂಕು ಜೊತೆ ಕಾರ್ಯದರ್ಶಿ ಎಸ್.ಮುನೀರ್ ಕಂಡ್ಲೂರು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಮುಜಾವರ್ ಅಬು ಮುಹಮ್ಮದ್ ಕುಂದಾಪುರ ವಂದಿಸಿದರು.