ಸಮಾಜದ ಕುಂದುಕೊರತೆ ನಿವಾರಿಸುವ ಜವಾಬ್ದಾರಿ ವಕೀಲರದ್ದು: ನ್ಯಾ.ವಿಶ್ವಜಿತ್ ಶೆಟ್ಟಿ

ಕುಂದಾಪುರ, ಎ.20: ನ್ಯಾಯಾಂಗಕ್ಕೆ ವಕೀಲರ ಸಂಘವೇ ಧ್ವನಿ. ಕೋರ್ಟ್ ಕಲಾಪ, ನ್ಯಾಯದಾನ ಎಲ್ಲದರಲ್ಲೂ ಸಂಘದ ಪಾತ್ರ ಮಹತ್ವದ್ದಾಗಿದೆ. ಸಂಘದಲ್ಲಿ ರಾಜಕೀಯ ಇರಬಾರದು. ಸಮಾಜದಲ್ಲಿರುವ ಕುಂದುಕೊರತೆ ಯನ್ನು ನಿವಾರಿಸುವ ಮಹತ್ತರ ಜವಾಬ್ದಾರಿ ವಕೀಲರ ಸಂಘಕ್ಕಿದೆ. ವಕೀಲರು ಹಾಗೂ ನ್ಯಾಯಾಧೀಶರು ಒತ್ತಡದ ನಡುವೆಯೂ ಆರೋಗ್ಯದ ಕಡೆಗೆ ಗಮನ ಕೊಡಬೇಕು ಎಂದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಹೇಳಿದ್ದಾರೆ.
ಕುಂದಾಪುರ ಫೆರ್ರಿ ರಸ್ತೆಯ ಗಿಳಿಯಾರು ಕುಶಲ ಹೆಗ್ಡೆ ರೋಟರಿ ಭವನದಲ್ಲಿ ಶುಕ್ರವಾರ ನಡೆದ ಕುಂದಾಪುರ ವಕೀಲರ ಸಂಘದ ನೂತನ ಪದಾಧಿಕಾರಿಗಳ ’ಪದ ಸಂಭ್ರಮ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ವಕೀಲರ ಸಂಘದ ನೂತನ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಅವರಿಗೆ ನಿರ್ಗಮಿತ ಅಧ್ಯಕ್ಷ ಹಂದಟ್ಟು ಪ್ರಮೋದ ಹಂಧೆ ಅಧಿಕಾರ ಹಸ್ತಾಂತರಿಸಿದರು. ಜಿಲ್ಲಾ ನಿವೃತ್ತ ನ್ಯಾಯಾಧೀಶ ಎಂ.ದೇವರಾಜ್ ಭಟ್, ಹಿರಿಯ ವಕೀಲರಾದ ಪಿ.ಶ್ರೀಧರ ರಾವ್, ಜಿ.ಸಂತೋಷ ಕುಮಾರ್ ಶೆಟ್ಟಿ, ಎಚ್.ಮೋಹನದಾಸ್ ಶೆಟ್ಟಿ, ಎಂ.ಸದಾನಂದ ಶೆಟ್ಟಿ, ಶಿರಿಯಾರ ಮುದ್ದಣ್ಣ ಶೆಟ್ಟಿ, ಗಿಳಿಯಾರು ರಾಮಣ್ಣ ಶೆಟ್ಟಿ, ಎಂ.ಭಾಸ್ಕರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ರಾಜ್ಯ ಸರಕಾರದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಗಂಗಣ್ಣನವರ್, ಹಿರಿಯ ನ್ಯಾಯವಾದಿಗಳಾದ ಮಾಧವ ರಾವ್ ಮಟ್ಟಿ, ಎ.ಬಾಲಕೃಷ್ಣ ಶೆಟ್ಟಿ, ಗಿಳಿಯಾರು ಕುಶಲ ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಉದಯ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷ ಎಂ.ಸಂತೋಷ್ ಆಚಾರ್, ಜೊತೆ ಕಾರ್ಯದರ್ಶಿ ಜೆ.ಗೋವಿಂದ ನಾಯ್ಕ, ಕೋಶಾಧಿಕಾರಿ ಐ.ನಾಗರಾಜ್ ರಾವ್ ಉಪಸ್ಥಿತರಿದ್ದರು.
ವಕೀಲ ಟಿ.ಬಿ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರಾದ ರವಿಕಿರಣ್ ಮುರ್ಡೇಶ್ವರ, ಬನ್ನಾಡಿ ಸೋಮನಾಥ ಹೆಗ್ಡೆ, ಕೆ.ಬಿ.ಶೆಟ್ಟಿ, ವಿಕಾಸ ಹೆಗ್ಡೆ ಪರಿಚಯಿಸಿದರು. ರಾಘವೇಂದ್ರ ಚರಣ್ ನಾವಡ ಹಾಗೂ ರಮೀಝಾ ಕಾರ್ಯಕ್ರಮ ನಿರೂಪಿಸಿದರು.