ಬೈಂದೂರಿನಲ್ಲಿ ಮೂಕಾಂಬಿಕಾ ವಿಮಾನ ನಿಲ್ದಾಣ ನಿರ್ಮಾಣ: ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲು ಸಿಎಂಗೆ ಬಿ.ವೈ.ರಾಘವೇಂದ್ರ ಮನವಿ

ಬೈಂದೂರು, ಎ.20: ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭಾರತದ ವಿವಿಧ ರಾಜ್ಯಗಳಿಂದ ಹಾಗೂ ಹೊರ ದೇಶಗಳಿಂದ ಪ್ರತಿದಿನ ಸಾವಿರಾರು ಯಾತಾರ್ಥಿಗಳು ಭೇಟಿ ನೀಡುತ್ತಿರುವುದರಿಂದ ಬೈಂದೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ಕೂಡಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವಿಮಾನ ನಿಲ್ದಾಣ ಮಂಜೂರಾತಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಬಿ.ವೈ.ರಾಘವೇಂದ್ರ ಈ ಹಿಂದೆಯೇ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಅದಕ್ಕೆ ರಾಜ್ಯ ಸರಕಾರದಿಂದ ಜಮೀನು ಹಸ್ತಾಂತರ ಹಾಗೂ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಬಂದಲ್ಲಿ ಶೀಘ್ರವಾಗಿ ವಿಮಾನ ನಿಲ್ದಾಣ ಮಂಜೂರು ಮಾಡುವು ದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರು ತಿಳಿಸಿದ್ದರು. ಆ ಹಿನ್ನೆಲೆಯಲ್ಲಿ ಬಿ.ವೈ ರಾಘವೇಂದ್ರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚಿಸಿದರು.
ಆದಷ್ಟು ಬೇಗ ರಾಜ್ಯ ಸರ್ಕಾರದಿಂದ ಜಮೀನು ಹಸ್ತಾಂತರ ಹಾಗೂ ಅಗತ್ಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ. ಒತ್ತಿನೆಣೆಯಲ್ಲಿ ಸುಮಾರು 500 ಎಕರೆಗೂ ಅಧಿಕ ಅರಣ್ಯ ಇಲಾಖೆಯ ವಿಸ್ತರಣಾ ಬ್ಲಾಕ್‌ನ ಸ್ಥಳ ಲಭ್ಯವಿದ್ದು, ಅಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿದರೆ ಭಕ್ತಾಧಿ ಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಈಗಾಗಲೇ ಕೆ.ಎಸ್.ಐ.ಐ.ಡಿ.ಸಿ ವತಿಯಿಂದ ಸರ್ವೆ ಕಾರ್ಯ ನಡೆದು ಉಡುಪಿ ಜಿಲ್ಲಾಧಿಕಾರಿಗಳಿಂದ ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.