ಮಕ್ಕಳ ಭಾವನೆಗಳಿಗೆ ಸ್ಪಂದಿಸುವ ಮನೋಭಾವ ಶಿಕ್ಷಕರಿಗೆ ಅಗತ್ಯ: ಅಶೋಕ್ ಕಾಮತ್

ಶಿರ್ವ: ತರಗತಿಯಲ್ಲಿ ವಿವಿಧ ಮನೋಭಾವನೆಯ ಅಧಿಕ ಕ್ರೀಯಾ ಶೀಲ ಹಾಗೂ ನಿಧಾನಗತಿಯ ವಿದ್ಯಾರ್ಥಿಗಳು ಇರುತ್ತಾರೆ. ಅವರ ಭಾವನೆ ಹಾಗೂ ಸ್ಪಂದನೆಗೆ ತಕ್ಕಂತೆ ಬೋಧನೆ ಮಾಡುವ ಕೌಶಲ್ಯ ವನ್ನು ಶಿಕ್ಷಕರು ರೂಢಿಸಿ ಕೊಂಡಾಗ ಕಲಿಕೆ ಅರ್ಥಪೂರ್ಣವಾಗುತ್ತದೆ ಎಂದು ಉಡುಪಿ ಡಯಟ್‌ನ ಪ್ರಾಂಶುಪಾಲ ಅಶೋಕ್ ಕಾಮತ್ ಹೇಳಿದ್ದಾರೆ.
ಉದ್ಯಾವರ ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಿಕ್ಷಕರಿಗಾಗಿ ಏರ್ಪಡಿ ಸಿದ ಐದು ದಿನಗಳ ಇಂಗ್ಲಿಷ್ ಮಾತುಗಾರಿಕೆ ಮತ್ತು ಬೋಧನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉದ್ಯಾವರ ಪಿತ್ರೋಡಿ ಹಿಂದುಸ್ಥಾನ್ ಮೆರಿನ್ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕ ಎಂ.ಕೆ. ಬಾಲರಾಜ್ ಶುಭ ಹಾರೈಸಿದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಬ್ರಹ್ಮಾವರ ಬಿಆರ್‌ಪಿ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಉದಯ್ ಕೋಟ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ಕಾರಂತ್ ವಹಿಸಿದ್ದರು.
ಸದಸ್ಯರಾದ ನಾಗೇಶ್ ಕುಮಾರ್, ಯು.ಬಿ.ಶ್ರೀನಿವಾಸ್, ಪ್ರತಾಪ್ ಕುಮಾರ್ ಉಪಸ್ಥಿತರಿದ್ದರು. ಸಮಿತಿ ಸದಸ್ಯ ಕೃಷ್ಣಕುಮಾರ್ ಮಟ್ಟು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಂತರ ಶಿಕ್ಷಕರಿಗೆ ತರಬೇತಿ ಶಿಬಿರ ಆರಂಭ ಗೊಂಡಿತು.