ಹಿಜಾಬ್ ತೆಗೆಸುವಾಗ ಸಂವಿಧಾನ ವಿರೋಧಿ ಆಗಿಲ್ಲವೇ ?: ಶ್ಯಾಮರಾಜ್ ಬಿರ್ತಿ

ಫೈಲ್ ಫೋಟೊ
ಉಡುಪಿ: ಸಿಇಟಿ ಪರೀಕ್ಷೆಗೆ ಹಾಜರಾಗುವವರಿಂದ ಜನಿವಾರ ತೆಗೆಸಿರುವುದನ್ನು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥರು ಖಂಡಿಸಿ, ಜನಿವಾರ ತೆಗೆಸಿದ್ದರಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಹೇಳಿದ್ದಾರೆ. ಅಂದು ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಹಾಕಿದ್ದ ರಿಂದ ಶಾಲೆಯಿಂದ ಹೊರಗಟ್ಟಿದ್ದಾಗ ತಮಗೆ ಇದು ಸಂಪ್ರದಾಯ ವಿರೋಧಿ ಧರ್ಮ ವಿರೋಧಿ ಅನಿಸ ಲ್ಲವೇ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಪ್ರಶ್ನಿಸಿದ್ದಾರೆ.
ಶಾಲೆಗೆ ಹೋಗುವ ಮಕ್ಕಳನ್ನು ಹಿಜಾಬ್ ಧರಿಸಿ ಬರುವಂತಿಲ್ಲ ಎಂದು ಶಾಲೆಯಿಂದ ಹೊರಹಾಕಿ ಆ ಹೆಣ್ಣು ಮಕ್ಕಳ ಶಿಕ್ಷಣದ ಭವಿಷ್ಯಕ್ಕೇ ಕೊಳ್ಳಿ ಇಟ್ಟಾಗ ತಮಗೆ ಇದು ಸಂವಿಧಾನ ವಿರೋಧಿ ಅನಿಸಲಿಲ್ಲವೇ? ಬಿಜಾಪುರ ಜಿಲ್ಲೆಯಲ್ಲಿ ಅಂದು ದಲಿತ ಐದು ವರ್ಷದ ಬಾಲಕ ಪಂಚಕಜ್ಜಾಯದ ಪಾತ್ರೆ ಮುಟ್ಟಿದಕ್ಕೆ ಸೌಟಲ್ಲಿ ಹೊಡೆದು ಕೊಂದಾಗ ತಮಗೆ ಹಿಂದೂ ಧರ್ಮದ ನೆನಪು ಬರಲಿಲ್ಲವೇ? ಅರಿವಿಲ್ಲದೆ ದಲಿತ ಬಾಲಕರು ಗೆಜ್ಜೆ ಕೋಲು ಬಿದ್ದದ್ದನ್ನು ಎತ್ತಿಕೊಟ್ಟಿದ್ದೆ ಅಪರಾಧ ಎಂದು ಥಳಿಸಿ, ದಂಡ ಹಾಕಿ ಬಹಿಷ್ಕಾರ ಹಾಕಿದಾಗ ಎಲ್ಲಿ ಹೋಗಿತ್ತು ತಮ್ಮ ಮನುಷ್ಯತ್ವ ಧರ್ಮ ರಕ್ಷಣೆಯ ಜವಾಬ್ದಾರಿ ಎಂದು ಅವರು ಸ್ವಾಮೀಜಿಯನ್ನು ಪ್ರಶ್ನಿಸಿದ್ದಾರೆ.
ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚಬಾರದು. ಭಾರತದ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು ಎಂದು ಶ್ಯಾಮ್‌ರಾಜ್ ಬಿರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.