ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು: ಪದವಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

ಉಡುಪಿ : ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರವು, ಕಾಲೇಜಿನ ಐಕ್ಯೂಎಸಿ, ಪ್ಲೇಸ್ಮೆಂಟ್ ಸೆಲ್ ಹಾಗೂ ಟೈಮ್ ಇನ್‌ಸ್ಟಿಟ್ಯೂಟ್ ಉಡುಪಿ ಇವರ ಸಹಯೋಗದೊಂದಿಗೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಹಿತಿ ಕಾರ್ಯಗಾರ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ. ಗಾಂವಕರ, ವಿದ್ಯಾರ್ಥಿಗಳಿಗೆ ಪಠ್ಯ, ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಅವಕಾಶ ಕಲ್ಪಿಸಿ ಕೊಡುವ ಮೂಲಕ ಕಡಿಮೆ ವೆಚ್ಚದ ಶಿಕ್ಷಣದೊಂದಿಗೆ ವೃತ್ತಿಪರ ಹಾಗೂ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ಸಂಸ್ಥೆಯಲ್ಲಿ ನೀಡಲಾಗುತ್ತದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ನಿರಂತರ ವೃತ್ತಿ ಮಾರ್ಗದರ್ಶನ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ತರಬೇತಿ ಕಾರ್ಯಕ್ರಮ ಗಳನ್ನು ಸಹ ಯಶಸ್ವಿಯಾಗಿ ನಡೆಸುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ತಿಳಿಸಿದರು.
ಮಂಗಳೂರಿನ ಕೋಚಿಂಗ್ ಸಂಸ್ಥೆ ಟೈಮ್ ಇನ್‌ಸ್ಟಿಟ್ಯೂಟ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಆಶಿತ್ ಪೂಜಾರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸರಕಾರಿ ಮತ್ತು ಖಾಸಗಿ ವಲಯದ ಉದ್ಯೋಗಾವ ಕಾಶಗಳು, ಪಿಜಿಸಿಇಟಿ, ಕ್ಯಾಟ್, ಜಿ-ಮ್ಯಾಟ್, ಮ್ಯಾಟ್, ಸ್ನಾಪ್ಸ್ ಪರೀಕ್ಷೆಗಳು, ಎಲ್‌ಐಸಿ, ಇಎಸ್‌ಐ, ರೈಲ್ವೇ, ಪೋಸ್ಟಲ್, ಸ್ಟಾಪ್ ಸಿಲೆಕ್ಷನ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳು ಬ್ಯಾಂಕಿಂಗ್ ಪರೀಕ್ಷೆಗಳು ಸೇರಿದಂತೆ ವಿವಿಧ ಹುದ್ದೆಗಳನ್ನು ಪಡೆಯಲು ಬೇಕಾದ ಅರ್ಹತೆ, ಅನುಭವಗಳ ಬಗ್ಗೆಯೂ ಮಾರ್ಗದರ್ಶನ ನೀಡಿದರು.
ಕಾಲೇಜಿನ ಅಂತಿಮ ಪದವಿ ವಿಭಾಗದ ಬಿಕಾಂ., ಬಿಬಿಎ, ಬಿಸಿಎ, ಬಿಎ, ಬಿಎಸ್‌ಡಬ್ಲ್ಯೂ ಹಾಗೂ ಬಿಎಸ್ಸಿ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಪದವಿ ವಿಭಾಗದ ಪ್ಲೇಸ್ಮೆಂಟ್ ಅಧಿಕಾರಿ ದಿನೇಶ್ ಎಂ. ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಸಂಘಟಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಪದವಿ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಶಾಂತ ಎನ್., ಸಹ ಪ್ರಾಧ್ಯಾಪಕ ಉಮೇಶ್ ಪೈ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ರುತಿಕಾ ಸ್ವಾಗತಿಸಿ, ವಿನಿಶಾ ವಂದಿಸಿದರು. ಶರಣ್ಯ ಕಾರ್ಯಕ್ರಮ ನಿರೂಪಿಸಿದರು.