ಯಕ್ಷ ಕಲಾವಿದ ಶಿರಿಯಾರ ಮಂಜು ನಾಯ್ಕ್ ಜನ್ಮ ಶತಮಾನೋತ್ಸವ

ಬ್ರಹ್ಮಾವರ, ಎ.24: ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಶಿರಿಯಾರ ಮಂಜು ನಾಯ್ಕ್ ಜನ್ಮ ಶತ ವರ್ಷ ಸಮಿತಿ ಆಶ್ರಯದಲ್ಲಿ ಶಿರಿಯಾರ ಮಂಜು ನಾಯ್ಕ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಎ.27ರಂದು ಶಿರಿಯಾರ ಗಣೇಶ್ ಪ್ರಸಾದ್ ಕಾಂಚನ್ ಅವರ ಮನೆಯ ಮುಂಭಾಗದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಜಯರಾಮ ಬಂಗೇರ ತಿಳಿಸಿದ್ದಾರೆ.
ಬ್ರಹ್ಮಾವರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಅಪರಾಹ್ನ 2:30ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಯಕ್ಷಗಾನ ವಿಮರ್ಶಕ ಎಸ್.ವಿ.ಉದಯ ಕುಮಾರ್ ಶೆಟ್ಟಿ ಪುಷ್ಪ ನಮನ ಸಲ್ಲಿಸಲಿದ್ದಾರೆ ಎಂದರು.
ಅಪರಾಹ್ನ 3 ಗಂಟೆಗೆ ಯಕ್ಷಗಾನ ಗೋಷ್ಠಿ ನಡೆಯಲಿದ್ದು ವಿದ್ವಾಂಸರಾದ ಎಂ.ಎಲ್.ಸಾಮಗ, ರಾಘವ ನಂಬಿಯಾರ್, ಎಸ್.ವಿ. ಉದಯ ಕುಮಾರ್ ಶೆಟ್ಟಿ ಭಾಗವಹಿಸಲಿದ್ದಾರೆ. ಅನಂತರ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಗಾನ ವೈವಿಧ್ಯ ನಡೆಯಲಿದೆ.
ಸಂಜೆ 5:30ಕ್ಕೆ ನಾಡೋಜ ಡಾ.ಜಿ.ಶಂಕರ್, ಆನಂದ ಸಿ.ಕುಂದರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕೊಡ್ಗಿ, ಕೃಷ್ಣಮೂರ್ತಿ ಮಂಜ, ಜಯಪ್ರಕಾಶ್ ಹೆಗ್ಡೆ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು ಮೊದಲಾದವರ ಉಪಸ್ಥಿತಿಯಲ್ಲಿ ಶಿರಿಯಾರ ಅವರ ಸಹವರ್ತಿ ಕಲಾವಿದರಿಗೆ ಸಮ್ಮಾನ ಹಾಗೂ ಶಿರಿಯಾರ ಮಂಜು ನಾಯ್ಕ್ರ ಹಿತೈಷಿಗಳಿಗೆೆ ಕೃತಜ್ಞತೆ ಸಮರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಶಿರಿಯಾರ ಮಂಜು ನಾಯ್ಕ್ ಅವರು ಮಣಿಪಾಲದಲ್ಲಿ ಯಕ್ಷಗಾನ ಪ್ರದರ್ಶನ ನೀಡುತಿದ್ದಾಗಲೇ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾಗಿದ್ದರು. ಶಿರಿಯಾರ ಶತ ವರ್ಷ ಸಂಭ್ರಮ ಸಮಿತಿ ಕಾರ್ಯದರ್ಶಿ ರಮೇಶ್ ಮಂಜು, ಸುರೇಶ್ ಶಿರಿಯಾರ, ಖಜಾಂಚಿ ಗಣೇಶ್ ಪ್ರಸಾದ್ ಕಾಂಚನ್ ಪತ್ರಿಕಾಗೋಷ್ಠಿಯಲ್ಲಿದ್ದರು.