ಡಾ.ರಾಜ್‌ಕುಮಾರ್ ಮೇರುವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

Update: 2025-04-24 21:00 IST
ಡಾ.ರಾಜ್‌ಕುಮಾರ್ ಮೇರುವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ
  • whatsapp icon

ಉಡುಪಿ, ಎ.24: ಕನ್ನಡ ಚಲನಚಿತ್ರರಂಗದ ವರನಟ ಡಾ.ರಾಜ್ ಕುಮಾರ್ ಅವರ ಮೇರುವ್ಯಕ್ತಿತ್ವ, ಕನ್ನಡಾಭಿಮಾನ, ಭಾಷಾಪ್ರೇಮ ಹಾಗೂ ಸಮಾಜಮುಖಿ ಕಾರ್ಯಗಳು ಪ್ರತಿಯೊಬ್ಬರಿಗೂ ಮಾದರಿ ಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ.

ನಗರದ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ಹಾಗೂ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವರನಟ ಡಾ.ರಾಜ್‌ ಕುಮಾರ್ ಅವರ 97ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ. ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಡಾ.ರಾಜ್ ಕುಮಾರ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರೂ ಸಹ ರಾಜಕೀಯಕ್ಕೆ ಪ್ರವೇಶಿಸದೇ, ಚಿತ್ರರಂಗ ಎಂಬ ಒಂದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಇದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾ ಗಿಟ್ಟು, ಪೂರ್ಣ ಪರಿಶ್ರಮ ವಹಿಸಿ ಯಶಸ್ಸು ಸಾಧಿಸಿದ್ದಾರೆ. ಇದೇ ನಿಟ್ಟಿನಲ್ಲಿ ಇಂದಿನ ಯುವಪೀಳಿಗೆ ಸಹ ಜೀವನದಲ್ಲಿ ಗುರಿಯೊಂದಿಗೆ ಸಾಧನೆ ಮಾಡಿ ಕುಟುಂಬಕ್ಕೆ, ಸಮಾಜಕ್ಕೆ, ಸುತ್ತಮುತ್ತಲಿನ ಪರಿಸರಕ್ಕೆ ಕೊಡುಗೆ ನೀಡುವಂತಾ ಗಬೇಕು ಎಂದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಬಿ. ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ರಾಜ್‌ಕುಮಾರ್, ಕನ್ನಡ ಚಿತ್ರರಂಗದಲ್ಲಿ ಸುಮಾರು 5 ದಶಕಗಳ ಕಾಲ ನಟನೆಯನ್ನು ಮಾಡಿದ್ದು, 220ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿದವರಲ್ಲಿ ಇವರ ಕೊಡುಗೆ ಅಪಾರ ಎಂದರು.

ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಭವ್ಯಾ ನಾಗರಾಜ್, ರಾಜ್‌ ಕುಮಾರ್ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ, ಆಡುಮುಟ್ಟದ ಸೊಪ್ಪಿಲ್ಲ, ಡಾ.ರಾಜ್ ನಿರ್ವಹಿಸದ ಪಾತ್ರಗಳಿಲ್ಲ ಎಂಬಂತೆ ನಟನೆ, ಗಾಯನ, ಚಿತ್ರನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಕನ್ನಡಚಿತ್ರರಂಗವನ್ನು ಉತ್ತುಂಗ ಶಿಖರಕ್ಕೆ ಏರಿಸಿದ ಖ್ಯಾತಿ ಡಾ.ರಾಜ್ ಕುಮಾರ್‌ಗೆ ಸಲ್ಲುತ್ತದೆ ಎಂದರು.

ಡಾ.ರಾಜ್‌ಕುಮಾರ್ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದೇ ಕರೆಯಲಾಗುತ್ತದೆ. 1930-40ರಲ್ಲಿ ಕನ್ನಡ ಭಾಷೆಯ ಚಿತ್ರಗಳನ್ನು ಹೊರತುಪಡಿಸಿ, ಬೇರೆ ಬಾಷೆಯ ಚಿತ್ರಗಳೇ ಹೆಚ್ಚು ಬಿಡುಗಡೆಯಾ ಗುತ್ತಿದ್ದ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಜೀವ ಕಳೆಯನ್ನು ತುಂಬಿದವರು ಡಾ. ರಾಜ್ ಕುಮಾರ್, ಕಲ್ಯಾಣ್ ಕುಮಾರ್ ಹಾಗೂ ಉದಯ್ ಕುಮಾರ್ ಅವರು. ಕನ್ನಡ ಭಾಷೆ, ನುಡಿಗೆ ಅವರು ನೀಡಿದ ಪಾಮುಖ್ಯತೆ ಸಿನಿಮಾ ಮಾಧ್ಯಮ ಮೂಲಕ ಜನರನ್ನು ತಲುಪಿತು ಎಂದರು.

ಕಾಲೇಜಿನ ಪ್ರಾಂಶುಪಾಲ ಶ್ರೀಧರ ಪ್ರಸಾದ್ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾಗ್ಯಲಕ್ಷ್ಮೀ ಉಪ್ಪೂರು ಹಾಗೂ ರೋಹಿತ್ ಮಲ್ಪೆ ಇವರಿಂದ ಡಾ.ರಾಜ್‌ಕುಮಾರ್ ಗೀತ ಗಾಯನ ನಡೆಯಿತು.

ಕಾಲೇಜಿನ ಪ್ರೊ. ಡಾ. ರಾಜೇಂದ್ರ ಕೆ ಕಾರ್ಯಕ್ರಮ ನಿರೂಪಿಸಿದರೆ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮತ್ತು ಕಲಾನಿಕಾಯ ಡೀನ್ ಪ್ರೊ. ನಿಕೇತನ ವಂದಿಸಿದರು.



 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News