ಜನಿವಾರ ಪ್ರಕರಣ: ಬಿಜೆಪಿ, ಬ್ರಾಹ್ಮಣ ಸಂಘಟನೆಗಳಿಂದ ಪ್ರತಿಭಟನೆ

ಮಣಿಪಾಲ: ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲಾತ್ಕಾರವಾಗಿ ತೆಗೆಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಉಡುಪಿ ನಗರ ಸಮಿತಿ ಹಾಗೂ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಯಿತು.
ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಹೆರ್ಗ ಹರಿಪ್ರಸಾದ್ ಭಟ್ ಮಾತನಾಡಿ, ಶಿವಮೊಗ್ಗ, ಬೀದರ್ ಸಿಇಟಿ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ, ಕಾಶ್ಮೀರದಲ್ಲಿ ಧರ್ಮ ಕೇಳಿ ಹಿಂದೂಗಳನ್ನು ಹತ್ಯೆಗೈದ ಪ್ರಕರಣ ಅತ್ಯಂತ ದುಃಖಕರ. ಜಾತಿ, ಧರ್ಮದ ನೆಲೆಯಲ್ಲಿ ಒಡೆದಾಳುವ ನೀತಿ ಮೂಲಕ ತಮ್ಮ ಕಾಳು ಬೇಯಿಸುವ ಪಟ್ಟಭದ್ರ ಹಿತಾಸಕ್ತಿ ನಡೆಯುತ್ತಾ ಬಂದಿದೆ ಎಂದು ದೂರಿದರು.
ಚೇಂಪಿ ರಾಮಚಂದ್ರ ಭಟ್ ಮಾತನಾಡಿ, ವಿಶ್ವಕ್ಕೆ ಹಾಗೂ ಎಲ್ಲ ವರ್ಗದ ಜನರಿಗೆ ಒಳಿತಿನ ಪ್ರಾರ್ಥನೆ ಗಾಯತ್ರಿ ಮಂತ್ರದಲ್ಲಿದೆ. ಎಲ್ಲ ದುಃಖ ನಾಶವಾಗಬೇಕು. ಸರಕಾರದ ಸಂಬಂಧಿತರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು. ಕೃತ್ಯ ಮರುಕಳಿಸಬಾರದು. ಕಾಶ್ಮೀರ ಘಟನೆಯೂ ಖಂಡನೀಯ ಎಂದರು. ಸಗ್ರಿ ಆನಂದ ತೀರ್ಥ, ಅತಿಥಿ ಪ್ರಾಧ್ಯಾಪಕ ಡಾ. ಶಿವಾನಂದ ನಾಯಕ್ ಮುಂತಾದವರು ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಬಿಜೆಪಿ ನಗರ ಅಧ್ಯಕ್ಷ ದಿನೇಶ್ ಅಮೀನ್, ಬಾಲಾಜಿ ರಾಘವೇಂದ್ರ ಆಚಾರ್ಯ, ವೆಂಕಟೇಶ್ ಆಚಾರ್ಯ, ಬಿ. ಎಂ. ಆಚಾರ್ಯ, ಪ್ರಸಾದ್ ರಾವ್, ಸುಮಿತ್ರಾ ನಾಯಕ್, ದೇವೇಂದ್ರ ಪ್ರಭು, ಶ್ಯಾಂ ಪ್ರಸಾದ್ ಕುಡ್ವ, ಕೆ.ವಿ.ರಮಣಾಚಾರ್ಯ, ಶ್ರೀಕಾಂತ್ ಉಪಾಧ್ಯಾಯ, ನಾಗರಾಜ್ ಉಪಾಧ್ಯಾಯ, ಸಂದೀಪ್ ಮಂಜ, ಮಂಜುನಾಥ ಹೆಬ್ಬಾರ್ ಉಪಸ್ಥಿತರಿದ್ದರು.
ಸಭೆಯಲ್ಲಿ ರಾಜ ಸರಕಾರದ ವಿರುದ್ದ ಧಿಕ್ಕಾರ ಕೂಗಲಾಯಿತು. ಬಳಿಕ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಅವರ ಮೂಲಕ ರಾಜ್ಯಪಾಲರಿಗೆ ಅರ್ಪಿಸಲಾಯಿತು. ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜಗದೀಶ್ ಆಚಾರ್ಯ ಕಪ್ಪೆಟ್ಟು ಕಾರ್ಯಕ್ರಮ ನಿರೂಪಿಸಿ ಶಶಾಂಕ್ ಶಿವತ್ತಾಯ ವಂದಿಸಿದರು.