ಜನಿವಾರ ಪ್ರಕರಣ: ಕುಂದಾಪುರದಲ್ಲಿ ಬ್ರಾಹ್ಮಣ ಪರಿಷತ್ ಪ್ರತಿಭಟನೆ

ಕುಂದಾಪುರ, ಎ.24: ಶಿವಮೊಗ್ಗ ಮತ್ತು ರಾಜ್ಯದ ಇತರ ಕಡೆಗಳಲ್ಲಿ ಸಿಇಟಿ ಪರೀಕ್ಷೆ ಬರೆಯುವ ಸಂದರ್ಭ ವಿಪ್ರ ಸಮುದಾಯದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಬಲವಂತವಾಗಿ ಜನಿವಾರ ತೆಗೆಸಿ ಸಿಇಟಿ ಪ್ರವೇಶ ಪರೀಕ್ಷೆಗೆ ನಿರ್ಬಂಧವನ್ನು ವಿಧಿಸಿ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿರುವುದನ್ನು ಮತ್ತು ಕಾಶ್ಮೀರದ ಪಹಲ್ಗಾಮದಲ್ಲಿ ಅಮಾಯಕರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಕುಂದಾ ಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ವತಿಯಿಂದ ಕುಂದಾಪುರ ಉಪವಿಭಾಗಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರಾದ ಸುಬ್ರಹ್ಮಣ್ಯ ಹೊಳ್ಳ, ರಾಜ್ಯದ ಕೆಲವು ಕಡೆಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ದೈಹಿಕ ತಪಾಸಣೆ ಮಾಡುವ ನೆಪದಲ್ಲಿ ವಿದ್ಯಾರ್ಥಿಗಳು ಹಾಕಿಕೊಂಡಿದ್ದ ಜನಿವಾರವನ್ನು ಪರೀಕ್ಷಾ ಕೇಂದ್ರದ ಅಧಿಕಾರಿಗಳು ದುರುದ್ದೇಶಪೂರ್ವಕವಾಗಿ ಹಾಗೂ ವಿದ್ಯಾರ್ಥಿಗಳ ಇಚ್ಛೆಗೆ ವಿರುದ್ಧವಾಗಿ ತೆಗೆಸಿರುವುದು ಖಂಡನೀಯ ಎಂದರು.
ಯಾವುದೇ ಪ್ರವೇಶ ನಿಯಮಗಳಲ್ಲಿ ಜನಿವಾರ ಧರಿಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರ್ಬಂಧ ಇಲ್ಲದಿ ದ್ದರೂ, ವೈಯಕ್ತಿಕ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯಕ್ಕೆ ಕಾನೂನು ಬಾಹಿರವಾಗಿ ಸಾರ್ವಜನಿಕವಾಗಿ ಧಕ್ಕೆ ಉಂಟುಮಾಡಿದ್ದು, ಅಧಿಕಾರಿಗಳ ಈ ಕೃತ್ಯದಿಂದ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಹಾಗೂ ಜನಿವಾರ ಧಾರಣೆಯ ನಂಬಿಕೆ ಉಳ್ಳಂತಹ ಸಾರ್ವಜನಿಕರ ಭಾವನೆಗಳಿಗೆ ತೀವ್ರವಾದ ಘಾಸಿ ಉಂಟು ಮಾಡಿದೆ ಎಂದರು.
ವಿಪ್ರವಾಣಿ ಸಂಪಾದಕ ಶಂಕರ ರಾವ್ ಕಾಳಾವರ ಮಾತನಾಡಿ, ಬ್ರಾಹ್ಮಣರ ಏಳಿಗೆಯನ್ನು ಸಹಿಸಲಾಗದೆ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದಂತೆ ನೋಡಿಕೊಳ್ಳುವ ದುರುದ್ದೇಶ ದಿಂದ ರಾಜ್ಯದ ಕೆಲವು ಕಡೆಗಳಲ್ಲಿ ಜನಿವಾರ ತೆಗೆಸಿ ಮಾನಸಿಕ ಹಿಂಸೆ ನೀಡಿದ್ದಾರೆ. ಇದರಿಂದ ಇಡೀ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದಂತಾಗಿದ್ದು, ಈ ಘಟನೆಗೆ ಕಾರಣರಾದವರಿಗೆ ಸರಕಾರ ಕಠಿಣ ಶಿಕ್ಷೆ ನೀಡಬೇಕು ಎಂದರು.
ಇದೇ ಸಂದರ್ಭ ಮನವಿಯನ್ನು ಪ್ರಭಾರ ತಹಶೀಲ್ದಾರ್‌ಗೆ ಸಲ್ಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಕುಂದಾಪುರ ಅಧ್ಯಕ್ಷ ಎಸ್.ಕೃಷ್ಣಾನಂದ ಚಾತ್ರ, ಪ್ರಧಾನ ಕಾರ್ಯದರ್ಶಿ ವಾದಿರಾಜ ಹೆಬ್ಬಾರ್, ಯುವ ವಿಪ್ರ ವೇದಿಕೆ ಅಧ್ಯಕ್ಷೆ ಪವಿತ್ರ ಅಡಿಗ, ಮಹಿಳ ವೇದಿಕೆ ಅಧ್ಯಕ್ಷೆ ಭಾರ್ಗವಿ ಭಟ್ ಬೆಳ್ವೆ, ಯುವ ವೇದಿಕೆ ಅಧ್ಯಕ್ಷ ಕೇಶವ ಅಡಿಗ ಬಸ್ರೂರು, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಪ್ರಧಾನ ಕಾರ್ಯದರ್ಶಿ ಗಣೇಶ ರಾವ್, ರಾಘವೇಂದ್ರ ಅಡಿಗ, ಸಂದೇಶ ಭಟ್ ಮೊದಲಾದವರು ಉಪಸ್ಥಿತರಿದ್ದರು.